ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ಗ್ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್‌ ಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ‘ಮನರೇಗಾ ಉಳಿಸಿ ಆಂದೋಲನದ” ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚೆಗೆ ಬಿಜೆಪಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಕಾಯ್ದೆಯನ್ನು ರದ್ದು ಮಾಡಿ, ದುರುದ್ದೇಶದಿಂದ ವಿಬಿ ಗ್ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಹೊಸ ಕಾಯ್ದೆಗೆ ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಶನ್ (ಗ್ರಾಮೀಣ) ಎಂಬ ಹೆಸರಿಟ್ಟಿದ್ದಾರೆ.
2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರದಾನಿಯಾಗಿದ್ದ ಸಂದರ್ಭದಲ್ಲಿ ನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂತೆಯೇ ಆಹಾರ ಹಕ್ಕು, ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಅರಣ್ಯ ಕಾಯ್ದೆ ಗಳನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ಬಂದ ಜನಪರ ಕಾಯ್ದೆಗಳಾಗಿದ್ದವು. ಮಹಿಳೆಯರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಸಣ್ಣ ರೈತರ ಬಗ್ಗೆ ಚಿಂತನೆ ಮಾಡುವ ಏಕೈಕ ಪಕ್ಷ ಕಾಂಗ್ರೆಸ್.
ಬಿಜೆಪಿಯವರು ಈ ಜನಪರ ಯೋಜನೆಗಳನ್ನು ನಾಶಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಸುಮಾರು ಶೇ. 53 ರಷ್ಟು ಮಹಿಳೆಯರು, ಶೇ. 28 ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಮತ್ತು ಸುಮಾರು 5 ಲಕ್ಷ ಅಂಗವಿಕಲರು ಕೂಲಿ ಕೆಲಸದಲ್ಲಿ ನಿರತರಾಗಿದ್ದು, ನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಆದರೆ ಕೇಂದ್ರ ಸರ್ಕಾರ, ಆರ್ ಎಸ್ ಎಸ್ ನವರ ಜೊತೆಗೂಡಿ ಬಡಜನರು ಸದಾ ಸೇವಕರಾಗಿಯೇ ಇರಬೇಕೆಂದು ಹುನ್ನಾರ ಮಾಡಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ Randeep Singh Surjewala, ಕೆಪಿಸಿಸಿ ಕಾರ್ಯಾಧ್ಯಕ್ಷರಾದ GC Chandrashekhar, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ‌ ಅಹ್ಮದ್ ಸೇರಿ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದರು.