ಬೆಂಗಳೂರು: ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿರುವ 153.39 ಎಕ್ರೆ ಅರಣ್ಯ ಭೂಮಿಯಲ್ಲಿ ಬೃಹತ್ ಜೈವಿಕ ಉದ್ಯಾನವನ ಅಭಿವೃದ್ಧಿಪಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. ಇದನ್ನೂ ಓದಿ :ಕಮಲ್ ಹಾಸನ್‌ಗೆ ಕನ್ನಡದ ಪುಸ್ತಕ ನೀಡಿದ ರಂಜನಿ ರಾಘವನ್
ಮಾದಪ್ಪನಹಳ್ಳಿ ನೆಡುತೋಪಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ವಶದಲ್ಲಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ವಿಧ್ಯುಕ್ತವಾಗಿ ಹಿಂಪಡೆಯಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಉದ್ಯಾನ ಮುಂಬರುವ ದಿನಗಳಲ್ಲಿ ಉತ್ತರ ಬೆಂಗಳೂರಿಗೆ ಮಹತ್ವದ ಶ್ವಾಸ ತಾಣವಾಗಲಿದೆ ಎಂದರು.
ಇಲ್ಲಿ ಕೆಎಫ್‌ಡಿಸಿ ನೀಲಗಿರಿ ಮರ ಬೆಳೆಸಿದ್ದು, ಈ ಎಲ್ಲ ಮರಗಳನ್ನೂ ತೆರವು ಮಾಡಿ, ಸ್ಥಳೀಯ ಪ್ರಭೇದದ ಬಿಲ್ವ, ಮಹಾಬಿಲ್ವ, ಹೊನ್ನೆ, ನೇರಳೆ, ಮತ್ತಿ, ಆಲ, ಅರಳಿಯ ಜೊತೆಗೆ ಪಶ್ಚಿಮಘಟ್ಟದಲ್ಲಿ ಬೆಳೆಯುವ ವಿವಿಧ ಪ್ರಭೇದದ ಸಸ್ಯಗಳನ್ನೂ ಬೆಳೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ : ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ – ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ನಾಪತ್ತೆ
ಪ್ರಸ್ತುತ ಈ 154 ಎಕ್ರೆ ಪ್ರದೇಶದಲ್ಲಿ ನೀಲಗಿರಿಯ ಜೊತೆಗೆ ಹೊನ್ನೆ, ಬೀಟೆ, ಜಾಲಿ, ಕಗ್ಗಲಿ, ಎಲಚಿ, ಚಿಗರೆ, ಹೊಳೆಮತ್ತಿ, ಮತ್ತಿ, ಕರಿಮತ್ತಿ ಮೊದಲಾದ 800 ಮರಗಳಿದ್ದು, ಅವುಗಳನ್ನು ಸಂರಕ್ಷಿಸಲಾಗುವುದು ಎಂದರು.
ಎಲ್ಲಾ 154 ಎಕ್ರೆ ಅರಣ್ಯ ಭೂಮಿಗೂ ಕಾಂಪೌಂಡ್ ಹಾಕಲಾಗಿದ್ದು, ಒತ್ತುವರಿ ಆಗದಂತೆ ರಕ್ಷಿಸಲಾಗಿದೆ. ಈ ಪ್ರದೇಶದಲ್ಲಿ ಇಂದಿರಾಗಾಂಧೀ ಜೈವಿಕ ಉದ್ಯಾನವನ, ವಿಶ್ವಗುರು ಬಸವಣ್ಣ ದಿವ್ಯೌಷಧೀಯ ಸಸ್ಯವನ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪಕ್ಷಿ ಲೋಕ, ನಾಡಪ್ರಭು ಕೆಂಪೇಗೌಡ ಕಿರು ಮೃಗಾಲಯ ಹಾಗೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ನಿರ್ಮಾಣ ಮಾಡಲು ಸಲಹೆ ಬಂದಿದೆ. ಈ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉದ್ಯಾನದ ಸ್ವರೂಪದ ಬಗ್ಗೆ ಹಿರಿಯ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಮತ್ತು ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ಮೀಸಲು ಅರಣ್ಯದಲ್ಲಿ ಅವಕಾಶವಿರುವ ಚಟುವಟಿಕೆಗಳನ್ನು ಮಾತ್ರ ಮಾಡಲಾಗುವುದು. ಅಗತ್ಯಬಿದ್ದರೆ ತೀರುವಳಿ ಅನುಮತಿ ಪಡೆದು ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.