ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ಮಾ.5ಬುಧವಾರ ದಂದು ಲೋಕಕಲ್ಯಾಣಾರ್ಥವಾಗಿ ಹಾಗೂ ಸಾನಿಧ್ಯ ವೃದ್ದಿಗಾಗಿ ಸುಮಾರು 105 ವರ್ಷಗಳ ಬಳಿಕ ಶತಚಂಡಿಕಾಯಾಗ ಪೂಜೆ ನಡೆಯಲಿದ್ದು, ಈಗಾಗಲೇ ವೈಧಿಕ ಕಾರ್ಯಕ್ರಮಗಳು ಆರಂಭಗೊಂಡಿದೆ.

ಮಾ.5ರ ಬೆಳಿಗ್ಗೆ 6 ರಿಂದ ಶತಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ ಗಂಟೆ 12 ಕ್ಕೆ ಪೂರ್ಣಾಹುತಿಯಾಗಲಿದೆ. ಮಾ.6 ರಂದು ಗುರುವಾರ ದೊಡ್ಡ ರಂಗಪೂಜೆ ಉತ್ಸವ ನಡೆಯಲಿದೆ. ಮಾ.1 ರಿಂದ ಶ್ರೀ ಕ್ಷೇತ್ರದಲ್ಲಿ ವೈಧಿಕ ,ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಈಗಾಗಲೇ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ವ್ಯವಸ್ಥೆ ಬಗ್ಗೆ ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಶಾಲವಾದ ಪಾರ್ಕ್: ಉತ್ತಮವಾದ ವ್ಯವಸ್ಥೆ
2019 ರಲ್ಲಿ ಕ್ಷೇತ್ರದಲ್ಲಿ ನಡೆದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಇತಿಹಾಸ ನಿರ್ಮಾಣ ಮಾಡಿತ್ತು. ಸ್ವಯಂಸೇವಕರ ವಿವಿಧ ತಂಡಗಳು ಮಾಡಿದ ಜವಬ್ದಾರಿಯ ಸೇವೆ ಮಾದರಿಯಾಗಿ ಮೂಡಿಬಂದಿತ್ತು. ಇಂದೆಂದು ಕಂಡಯರಿಯದ ರೀತಿಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿತ್ತು.

ಇದೀಗ 105 ವರ್ಷಗಳ ಬಳಿಕ ಶ್ರೀ ಕ್ಷೇತ್ರದಲ್ಲಿ ನಡೆಯುವ ಶತಚಂಡಿಕಾಯಾಗ ಕಾರ್ಯಕ್ರಮ ಕೂಡ ಅದೇ ಮಾದರಿಯಲ್ಲಿ ಯಶಸ್ಸು ಕಾಣಬೇಕು ಎಂಬ ನಿಟ್ಟಿನಲ್ಲಿ ಸ್ವಯಂಸೇವಕರ ತಂಡ ಹಗಲಿರುಳು ಶ್ರಮಿಸುತ್ತಿವೆ.
ಮಾ.1 ರಿಂದಲೇ ಕ್ಷೇತ್ರದಲ್ಲಿ ನಿರಂತರವಾಗಿ ಫಲಹಾರ ಅನ್ನದಾನ ಸೇವೆ ನಡೆಯುತ್ತಿದ್ದು, ಭಕ್ತರು ಸೆಖೆಯಿಂದ ಮುಕ್ತಿಯನ್ನು ಪಡೆಯುವ ಸಲುವಾಗಿ ಮತ್ತು ಆರಾಮದಾಯಕ ಊಟವನ್ನು ಮಾಡಬೇಕು ಎಂಬ ಹಂಬಲದಿಂದ ಊಟದ ಜಾಗಕ್ಕೆ ಜರ್ಮನ್ ಟೆಂಟ್ ಅಳವಡಿಸಿ ತಂಪಾದ ಗಾಳಿಗಾಗಿ ಎರೋಪ್ಲಾನ್ ಪ್ಯಾನ್ ಅಳವಡಿಕೆ ಮಾಡಲಾಗಿದೆ. ಊಟದ ಸಂಪೂರ್ಣವಾದ ವ್ಯವಸ್ಥೆಯನ್ನು ಸ್ವಯಂಸೇವಕ ರ ತಂಡ ನೋಡಿಕೊಳ್ಳುತ್ತಿದ್ದು,ಬಂದ ಭಕ್ತರಿಗೆ ಒಂದು ಚೂರು ಚ್ಯುತಿಯಾಗದ ರೀತಿಯಲ್ಲಿ ನಗುಮೊಗದ ಸ್ವಾಗತದ ಕರೆ ಭಕ್ತರಿಗೆ ಸಂತಸ ನೀಡುತ್ತಿದೆ.

ಈಗಾಗಲೇ ಸಾವಿರ ಸೀಮೆಯ ಭಕ್ತಾದಿಗಳು ಹೊರಕಾಣೆಕೆ ಅರ್ಪಣೆ ಮಾಡಿದ್ದಾರೆ.
ವಾಹನಗಳಲ್ಲಿ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನಗಳ ಪಾರ್ಕಿಂಗಾಗಿ ವಿಶಾಲವಾದ ಜಾಗದ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪಾರ್ಕ್ ವ್ಯವಸ್ಥೆಯನ್ನು ನೋಡಿಕೊಳ್ಳಲು ಸ್ವಯಂಸೇವಕರ ತಂಡ ಕೆಲಸ ಮಾಡುತ್ತಿದೆ. ಹಾಗಾಗಿ ಎಲ್ಲೂ ಕೂಡ ಜನಸಂದಣಿಯ ತೊಂದರೆಯಿಲ್ಲದೆ, ಟ್ರಾಫಿಕ್ ವ್ಯವಸ್ಥೆಯಲ್ಲಿ ಲೋಪದೋಷಗಳಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮೂಡಿಬಂದಿದೆ.
ಬನ್ನಿ ಭಕ್ತರೆ ಬನ್ನಿ…ಶ್ರೀ ಕ್ಷೇತ್ರದಲ್ಲಿ ನಡೆಯುವ ಶತಚಂಡಿಕಾಯಾಗದಲ್ಲಿ ಭಾಗವಹಿಸಿ….