ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 23 ರಿಂದ 25, 2025 ರವರೆಗೆ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಫೆಬ್ರವರಿ 23, 2025 ರಂದು, ಅವರು ಮಧ್ಯಪ್ರದೇಶದ ಛತ್ತರ್ ಪುರ ಜಿಲ್ಲೆಯಲ್ಲಿ ಪ್ರಯಾಣಿಸಲಿದ್ದಾರೆ ಮತ್ತು ಅಂದು ಮಧ್ಯಾಹ್ನ 2 ಗಂಟೆಗೆ, ಪ್ರಧಾನಮಂತ್ರಿಯವರು ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಫೆಬ್ರವರಿ 24 ,2025 ರಂದು, ಸುಮಾರು 10 ಗಂಟೆಗೆ, ಪ್ರಧಾನಮಂತ್ರಿಯವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ. ನಂತರ, ಅವರು ಬಿಹಾರದ ಭಾಗಲ್ಪುರಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಮಧ್ಯಾಹ್ನ 2:15 ರ ಸುಮಾರಿಗೆ, ಪ್ರಧಾನಮಂತ್ರಿಯವರು ಪಿಎಂ ಕಿಸಾನ್ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹಾಗೂ ಆನಂತರ ಅವರು ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಲಿದ್ದಾರೆ ಮತ್ತು ಸಂಜೆ 6 ಗಂಟೆಗೆ ಅವರು “ಜುಮೋಯಿರ್ ಬಿನಂದಿನಿ (ಮೆಗಾ ಜುಮೋಯಿರ್) 2025” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 25 ರಂದು, ಬೆಳಗ್ಗೆ ಸುಮಾರು 10:45 ಗಂಟೆಗೆ, ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ “ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025” ಅನ್ನು ಉದ್ಘಾಟಿಸಲಿದ್ದಾರೆ.