ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ಇದೀಗ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಸಂಜೆ ವೇಳೆಗೆ ಫ್ರಾನ್ಸ್ ತಲುಪಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ 3ನೇ ಆವೃತ್ತಿಯ ಕೃತಕ ಬುದ್ಧಿಮತ್ತೆ (AI) ಆ್ಯಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ.
ಇನ್ನು ತಮ್ಮ ಫ್ರಾನ್ಸ್ ಭೇಟಿಯನ್ನು ʻಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧ ಬಲಪಡಿಸುವ ಪ್ರಮುಖ ಕ್ಷಣ..ʼ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, AI ಮತ್ತು ಪರಮಾಣು ಶಕ್ತಿ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸುವುದಾಗಿ ಹೇಳಿದ್ದಾರೆ.
ಫ್ರಾನ್ಸ್ ಪ್ರವಾಸದ ಬಳಿಕ ಫೆಬ್ರವರಿ 12ರಂದು ಎರಡು ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಲಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿರುವ ಪ್ರಧಾನಿ ಮೋದಿ, ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಲಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಇದು ಪ್ರಧಾನಿ ಮೋದಿ ಅವರ ಮೊದಲ ಭೇಟಿಯಾಗಿದೆ. ಈ ಸಂಸತವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬರುವ ಎರಡು ದಿನಗಳ ಭೇಟಿಯ ಸಮಯದಲ್ಲಿ ತಮ್ಮ ಸ್ನೇಹಿತ ಟ್ರಂಪ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಈ ಭೇಟಿಯು ಭಾರತ-ಯುಎಸ್ಎ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹಾಗೂ ವೈವಿಧ್ಯಮಯ ವಲಯಗಳಲ್ಲಿ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಅಧ್ಯಕ್ಷ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಕೆಲಸ ಮಾಡಿದ್ದನ್ನು ನಾನು ಆತ್ಮೀಯವಾಗಿ ಸ್ಮರಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಫೆಬ್ರವರಿ 10 ರಂದು (ಸೋಮವಾರ) ಪ್ಯಾರಿಸ್‌ಗೆ ಆಗಮಿಸಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿರುವ ಭೋಜನಕೂಟದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖ ಜಾಗತಿಕ ನಾಯಕರು, ಟೆಕ್ ಉದ್ಯಮದ ಪ್ರಮುಖ CEOಗಳು ಮತ್ತು ಇತರ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.
* AI ಆ್ಯಕ್ಷನ್ ಶೃಂಗಸಭೆಯು ಫೆಬ್ರವರಿ 11(ಮಂಗಳವಾರ) ರಂದು ನಡೆಯಲಿದೆ. ಯುನೈಟೆಡ್ ಕಿಂಗ್‌ಡಮ್ (2023) ಮತ್ತು ದಕ್ಷಿಣ ಕೊರಿಯಾ (2024)ದಲ್ಲಿ ನಡೆದ ಹಿಂದಿನ ಆವೃತ್ತಿಗಳ ಮುಂದುವರಿಕೆಯಾಗಿ ಈ ಶೃಂಗಸಭೆಯನ್ನು ಆಯೋಜಿಸಲಾಗಿದೆ. AI ತಂತ್ರಜ್ಞಾನಗಳ ಜವಾಬ್ದಾರಿಯುತ ಮತ್ತು ನೈತಿಕ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಈ ಶೃಂಗಸಭೆ ಹೊಂದಿದೆ. ಜಾಗತಿಕ ಆರ್ಥಿಕತೆಯ ಭವಿಷ್ಯವನ್ನು ರೂಪಿಸುವಲ್ಲಿ ಇದು ನಿರ್ಣಾಯಕ ಪಾತ್ರವಹಿಸುತ್ತದೆ.
ಭಾರತ-ಫ್ರಾನ್ಸ್ CEOಗಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ವ್ಯಾಪಾರ, ತಂತ್ರಜ್ಞಾನ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಚರ್ಚೆಗಳು ಸೀಮಿತ ಮತ್ತು ನಿಯೋಗ ಮಟ್ಟದ ಎರಡೂ ಸ್ವರೂಪಗಳಲ್ಲಿ ನಡೆಯಲಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.