ಮಂಗಳೂರು, ಫೆ. 4: ಯೆನೆಪೊಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆ ವಿಶ್ವ ಕ್ಯಾನ್ಸರ್ ದಿನ 2025 ಅನ್ನು ‘ಯುವಕರ ಮೇಲೆ ಮಾದಕ ದ್ರವ್ಯ ಬಳಕೆಯ ಪ್ರಭಾವ’ ಎಂಬ ಮುಖ್ಯ ವಿಷಯದೊಂದಿಗೆ ಆಚರಿಸಿತು. ಈ ಕಾರ್ಯಕ್ರಮವು, ಯುವಕರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಬಳಕೆಯ ಬೆಳವಣಿಗೆ ಮತ್ತು ಅದರ ದೀರ್ಘಕಾಲೀನ ಶಾರೀರಿಕ, ಮಾನಸಿಕ ಆರೋಗ್ಯ, ಅಕಾಡೆಮಿಕ್ ಕಾರ್ಯಕ್ಷಮತೆ, ಸಂಬಂಧಗಳು ಮತ್ತು ಭವಿಷ್ಯದ ಅವಕಾಶಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಯೆನೆಪೊಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಪೂನೀತ್ ರಾಘವೇಂದ್ರ ಕೆ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರ ನಡುವೆ ಮಾದಕ ದ್ರವ್ಯ ಬಳಕೆಯ ಭಯಾನಕ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ಪರಿಸರವನ್ನು ಒದಗಿಸಿ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಪೂರಕ ಪಾತ್ರವಹಿಸಬೇಕು ಎಂದು ಸಲಹೆ ನೀಡಿದರು.

ನಿಮ್ಹಾನ್ಸ್, ಬೆಂಗಳೂರು ಇದರ ಎಪಿಡಿಮಿಯಾಲಜಿ ವಿಭಾಗದ ಯುವ ಸ್ಪಂದನಾ ಯೋಜನೆಯ ತರಬೇತಿ ಸಂಯೋಜಕಿ ವಿದ್ಯಾ ಹೆಗಡೆ ಮುಖ್ಯ ಆತಿಥಿಯಾಗಿ ಭಾಗವಹಿಸಿ ಮಾತನಾಡಿ ಮಾದಕ ದ್ರವ್ಯ ಬಳಕೆಯು ಮಿದುಳಿನ ಕಾರ್ಯವೈಖರಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ವರ್ತನೆಗೆ ಮೇಲೆ ಯಾವ ರೀತಿ ರಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದರು. ಅವರು ನಶಾಮೋಹದ ಪ್ರಾರಂಭಿಕ ಲಕ್ಷಣಗಳು, ತಕ್ಷಣದ ಪರಿಹಾರ ಕ್ರಮಗಳು, ಮತ್ತು ಕುಟುಂಬ ಹಾಗೂ ಸಮಾಜದ ಪಾತ್ರವನ್ನು ವಿವರಿಸಿದರು.

BNYS ಎರಡನೇ ವರ್ಷದ ವಿದ್ಯಾರ್ಥಿ ತುಫೈಲ್ ಪ್ರಾರ್ಥನಾ ಗೀತೆ ಹಾಡಿದರು, ಯೆನೆಪೊಯ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆಯ ಸಹ ಪ್ರಾಧ್ಯಾಪಕ ಅಜಿತ್ ಕೆ. ಸ್ವಾಗತಿಸಿ, CFSAP ಸಂಯೋಜಕಿ ಡಾ. ವಜ್ರಾಕ್ಷಿ ವಂದಿಸಿದರು.