ಬಂಟ್ವಾಳ :ಜಗತ್ತಿನ ಅಂಧ ಕಾರವನ್ನು ಹೋಗಲಾಡಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ. ಶಿಕ್ಷಕರಲ್ಲಿ ತಾಯಿಯ ಮಮತೆಯನ್ನು ಹೊಂದಿರುವಂತಹ ವಾತ್ಸಲ್ಯ ಗುಣವಿರಬೇಕು ಆಗ ಮಗು ಆಸಕ್ತಿಯಿಂದ ಕಲಿಯುತ್ತದೆ.
ಯಾರು ತ್ಯಾಗಮಯಿಯಾಗಿ ಶೈಕ್ಷಣಿಕ ವಿಚಾರಗಳಿಗಾಗಿ ಸೇವೆಯನ್ನು ಮಾಡುತ್ತಾರೋ ಅವರಿಗೆ ದೇವರ ಅನುಗ್ರಹ ಸದಾ ಇರುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ. ಜಿ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಶ್ರೀದೇವಿ ಗೆಳೆಯರ ಬಳಗ ಇದರ ಆಶ್ರಯದಲ್ಲಿ ನಡೆದ 2024 -25 ನೇ ಸಾಲಿನ “ಪ್ರತಿಭಾ ಪುರಸ್ಕಾರ” ಹಾಗೂ “ಅಕ್ಷರ ರತ್ನ “ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತಾ ಡಿ. ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಗತಿಗೆ ಸೇವೆ ಸಲ್ಲಿಸಿದ 7 ನಿಕಟ ಪೂರ್ವ ಅಧ್ಯಕ್ಷರುಗಳನ್ನು ಶಾಲಾ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
ಶಾಲಾ ವತಿಯಿಂದ ಸದರಿ ವರ್ಷದಿಂದ ಪ್ರಾರಂಭಿಸಲಾದ “ಅಕ್ಷರ ರತ್ನ” ಪ್ರಶಸ್ತಿಯನ್ನು ಸರಕಾರಿ ಶಾಲೆಗಳ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಯುತ ಚಿನ್ನಾ ಕಲ್ಲಡ್ಕ ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮೀಣ ಪ್ರದೇಶದ ಪುಟ್ಟ ಶಾಲೆಯ ಪ್ರತಿಭಾ ಪುರಸ್ಕಾರಕ್ಕೆ ಪ್ರಪ್ರಥಮವಾಗಿ ಭೇಟಿ ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಶಾಲೆ ಹಾಗೂ ಊರವರ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
ಶಾಲಾ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಡಾ.ತ್ರಿವೇಣಿ ರಮೇಶ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ರವರನ್ನು ಗೌರವಿಸಲಾಯಿತು. ಶಾಲೆಯ ಅಭಿವೃದ್ಧಿಯಲ್ಲಿ ವಿಶೇಷವಾಗಿ ಸಹಕರಿಸುತ್ತಿರುವ ಸಂಘ ಸಂಸ್ಥೆ ಹಾಗೂ ಮಹನೀಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರದ ನಿಮಿತ್ತ ಶಾಲಾ ಮಕ್ಕಳಿಗೆ ಕಲಿಕೆ- ಆಟೋಟ , ವಿಶೇಷ ಸಾಧನೆಗೈದ ಕರಾಟೆ ಪಟು ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧಾ ವಿಜೇತರಿಗೆ , ಅತ್ಯುತ್ತಮ ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ,ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ , ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ, ನೆಟ್ಲ ಮುಡ್ನೂರು ಪಂಚಾಯತ್ ಉಪಾಧ್ಯಕ್ಷರಾದ ಸಚ್ಚಿದಾನಂದ,ಸದಸ್ಯರುಗಳಾದ ಧನಂಜಯ ಗೌಡ, ಶಕೀಲಾ ಕೃಷ್ಣ ಮಿತ್ತಕೋಡಿ, ಪ್ರಧಾನ ಅಭ್ಯಾಗತರಾದ ಸಹ ಶಿಕ್ಷಕ ವೆಂಕಟೇಶ್ ಅನಂತಾಡಿ, ನಿವೃತ್ತ ಪ್ರಾಂಶುಪಾಲ ಜಯರಾಮ್ ರೈ, ಮಾಣಿ ಕ್ಲಸ್ಟರ್ ಸಿ. ಆರ್. ಪಿ ಸತೀಶ್ ರಾವ್, ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ಕೆ. ಎಸ್ ಶಾಲಾ ವರದಿ ವಾಚಿಸಿ, ಶಿಕ್ಷಕಿ ದೀಕ್ಷಾ ಬಹುಮಾನಿತರ ಪಟ್ಟಿ ವಾಚಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ವಂದಿಸಿ, ಅತಿಥಿ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಶ್ವಿತ ಸಹಕರಿಸಿದರು.