ಮಡಿವಾಳ ಸಮಾಜ ಇಂದು ಎಲ್ಲಾ ಸಮುದಾಯದ ಜೊತೆಗೂ ಪೈಪೋಟಿ ನೀಡುವಷ್ಟು ಸಾಮರ್ಥ್ಯ ಇರುವ ಸಮಾಜ. ಆದರೆ ಇಂದು ಮಡಿವಾಳರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗದೇ ಕೇವಲ ದಿನನಿತ್ಯದ ಕುಲಕಸುಬುಗಳಲ್ಲೇ ನಿರತರಾಗಿದ್ದಾರೆ ಎಂದು ಗಣೇಶಪುರ ಶ್ರೀ ಕ್ಷೇತ್ರ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಅಭಿಪ್ರಾಯಪಟ್ಟರು.
ಅವರು ಜ.7ರಂದು ಕೂಳೂರಿನ ಅಮೃತ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ ಮಂಗಳೂರು , ರಜಕ ಯೂತ್ಸ್ ಮಂಗಳೂರು ಮತ್ತು ಮಹಿಳಾ ಘಟಕದ ವತಿಯಿಂದ ಜರುಗಿದ 85ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಮುಂದಾದರೂ ಸಮಾಜದ ಒಗ್ಗಟ್ಟು, ಐಕ್ಯತೆ, ಬಲ ಪ್ರದರ್ಶನಕ್ಕೆ ಮಡಿವಾಳ ಸಮಾಜ ಮುಂದಾಗಬೇಕಾಗಿದೆ ಎಂದರು.
.
ಸಮಾಜದಲ್ಲಿ ಸಾಧನೆ ಮಾಡಿದವರನ್ನು ಎಲ್ಲರೂ ಗೌರವಿಸುತ್ತಾರೆ, ಸನ್ಮಾನಿಸುತ್ತಾರೆ. ಆದರೆ ಸಮುದಾಯದ ಸಂಘಟನೆಗಳಿಂದಲೇ ಸಿಗುವ ಗೌರವ ಎಲ್ಲದಕ್ಕಿಂತಲೂ ದೊಡ್ಡ ಸಂಮ್ಮಾನ. ಕುಲಕಸುಬುದಾರರನ್ನು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಸಂಘದ ನಡೆ ಅಭಿನಂದನೀಯವಾಗಿದೆ.
ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಅವರು ತಮ್ಮ ಜೊತೆಗೆ ಇದ್ದು ವೃದ್ಧಾಪ್ಯದಲ್ಲಿ ಆರೈಕೆ ಮಾಡುವಂತಾಗಬೇಕು ಎಂದು ಕಿವಿಮಾತು ನುಡಿದರು.
ಮೂಡುಬಿದಿರೆ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಾದದಲ್ಲಿ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಕಲೇಶಪುರದ ಪಿಡಬ್ಲ್ಯೂಡಿ ಕ್ಲಾಸ್-1 ಕಂಟ್ರಾಕ್ಟರ್ ಕೆ ವಿಶ್ವನಾಥ್ ಮಾತನಾಡಿ, ಇನ್ನೂ ಕೂಡಾ ನಮ್ಮ ಸಮಾಜ ಪ್ರಬಲವಾಗಿ ಗುರುತಿಸಿಕೊಂಡಿಲ್ಲ. ರಾಜಕೀಯವಾಗಿ ಒಗ್ಗಟ್ಟಾಗಬೇಕಾಗಿದೆ. ನಮ್ಮ ಸಮುದಾಯದಲ್ಲಿ ಸಂಸದ, ಶಾಸಕರಾದಲ್ಲಿ ನಮಗೆ ಬೇಕಾದ ಸರಕಾರಿ ಸವಲತ್ತು ಪಡೆದುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮುದಾಯ ಕೆಲಸ ಮಾಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ ಎನ್ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ವಿಭಾಗದ ಹಿರಿಯ ಪ್ರಬಂಧಕ ರಾಜೇಶ್ ಕೊಡಿಯಾಲ್ ಬೈಲ್, ರಜಕ ಯೂತ್ ಅಧ್ಯಕ್ಷ ಸಂಪತ್ ಕೊಂಡಾಣ, ದ.ಕ.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವೀಣಾಂಜಲಿ ನಾರಾಯಣ ಬಿಜೈ, ಸಂಘದ ಪ್ರಧಾನ ಕಾರ್ಯದರ್ಶಿ ರಾಮ ಬಂಗೇರ ಮಂಕುಡೆ ಉಪಸ್ಥಿತರಿದ್ದರು.
ಸಮಾಜದ ಹಿರಿಯ ಕುಲಕಸುಬುದಾರೆ ಗುಲಾಬಿ ಮಡಿವಾಳ್ತಿ ಭಟ್ರಕುಮೇರ್ ಪದವಿನಂಗಡಿ, ದೈವಾರಾಧಕರಾದ ಪಳ್ಳಿ ಕಾರ್ಕಳದ ಸತೀಶ್ ಮಡಿವಾಳ, ಕಟೀಲು ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಉಮೇಶ್ ಕುಪ್ಪೆಪದವು ಇವರನ್ನು ಗೌರವಿಸಲಾಯಿತು.
ಸಮಾಜ ಬಾಂಧವರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಪುರಸ್ಕಾರ, ವಿದ್ಯಾರ್ಥಿ ವೇತನ, ಆಕಸ್ಮಿಕ ಪರಿಹಾರ, ವಿದ್ಯಾನಿಧಿ ವಿತರಣೆ ನಡೆಯಿತು. ರಾಮ ಬಂಗೇರ ಮಂಕುಡೆ ವರದಿ ಮಂಡಿಸಿದರು, ಕೋಶಾಧಿಕಾರಿ ಶಶಿಧರ ಕೊಂಡಾಣ ಲೆಕ್ಕಪತ್ರ ಮಂಡಿಸಿದರು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಸಭಾ ಕಾರ್ಯಕ್ರಮದ ಬಳಿಕ ವಿದೂಷಿ ಶ್ರಾವ್ಯ ಕಿಶೋರ್ ಮುಚ್ಚೂರು ಇವರ ನಾಟ್ಯ ಕಲಾಂಜಲಿ ನೃತ್ಯ ಅಕಾಡೆಮಿ ಮುಚ್ಚೂರು ತಂಡದಿಂದ ಮತ್ತು ಸಂಘದ ಸದಸ್ಯರಿಂದ ಸಾಂಸ್ಕೃತಿಕ ನೃತ್ಯ ವೈಭವ ನಡೆಯಿತು. ಕಿಶೋರ್ ಮುಚ್ಚೂರು, ರಾಕೇಶ್ ಪದವಿನಂಗಡಿ, ಅಶೋಕ್ ಪೊಳಲಿಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗುರುಮಾಚಿದೇವರಿಗೆ ಪ್ರಾರ್ಥನೆ, ಪೂಜೆ ನಡೆದು, ಮಹಿಳಾ ಘಟಕ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.