ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷೆಯ ಕಾವೇರಿ ಐದನೇ ಹಂತದ ಯೋಜನೆಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿನ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದಲ್ಲಿ ಸಿ.ಎಂ.ಸಿದ್ಧರಾಮಯ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿ 2014ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ನೆರವೇರಿಸಿ, ಇಂದು ನಾನೇ ಲೋಕಾರ್ಪಣೆಗೊಳಿಸುತ್ತಿರುವ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಯಾಗಿದೆ. ಬೆಂಗಳೂರಿನ ನಿರಂತರ ಬೆಳವಣಿಗೆ ಮತ್ತು ಜನಸಂಖ್ಯೆಯ ಹೆಚ್ಚಳದಿಂದಾಗಿ ಹೊಸ ಸಂಪನ್ಮೂಲಗಳ ಹುಡುಕಾಟದ ಅವಶ್ಯಕತೆ ಕಂಡು ಬಂದಿತ್ತು. ಆಗ ಹೊಳೆದದ್ದೆ ಕಾವೇರಿ ನದಿಯ ಜಲ ಮೂಲ.• ಕಾವೇರಿ ನದಿಯ ನೀರನ್ನು ಬೆಂಗಳೂರಿನ ಬೇಡಿಕೆಗೆ ಬಳಸಿ ಕೊಳ್ಳಲು ಕರ್ನಾಟಕ ಸರ್ಕಾರ ಅನುಮತಿ ನೀಡಿತು. 1974 ರಿಂದೀಚೆಗೆ ನೀರು ಪೂರೈಕೆಗಾಗಿ ಕಾವೇರಿ ಜಲಮೂಲವನ್ನು ಹಂತಹಂತವಾಗಿ ಬಳಸಿಕೊಳ್ಳವುದು ಪ್ರಾರಂಭವಾಯಿತು.
• ಕಾವೇರಿ ನೀರು ಸರಬರಾಜು ಯೋಜನೆಯ 4 ನೇ ಘಟ್ಟ 2 ನೇ ಹಂತವನ್ನು ಪೂರ್ಣಗೊಳಿಸಿದ ನಂತರವೂ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲ್ಪಟ್ಟ 110 ಹಳ್ಳಿಗಳಿಗೆ ನೀರು ಪೂರೈಸಲು ಮಂಡಳಿಗೆ ಕಷ್ಟವಾಗುತ್ತಿತ್ತು.
• ನಗರದ ನೀರಿನ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾವೇರಿ 5ನೇ ಘಟ್ಟವನ್ನು 2 ಹಂತಗಳಲ್ಲಿ ಜಪಾನ್ ಇಂಟರ್ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ – ಜೈಕಾ ಆರ್ಥಿಕ ನೆರವಿನಿಂದ 2014 ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.
• ದೇಶದ ಅತಿದೊಡ್ಡ ನೀರು ಸರಬರಾಜು ಯೋಜನೆಯ ಹಿಂದೆ ಒಂದು ಭಗೀರಥ ಪ್ರಯತ್ನವಿದೆ.
• ಕಾವೇರಿ 5ನೇ ಹಂತದ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಸೇರಿದಂತೆ ಬೆಂಗಳೂರಿನ ಮೂಲೆ ಮೂಲೆಗೂ ಕಾವೇರಿ ನೀರು ಸರಬರಾಜು ಆಗಲಿದೆ.
• ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನದಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ 775 ಎಂಎಲ್ಡಿ ನೀರು ದೊರೆಯಲಿದೆ. ಇದು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲಿದೆ.