ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನದಿಂದ ರಮೇಶ್ ಕಲ್ಲಡ್ಕ ರಿಗೆ “ಶಾಂತಶ್ರೀ ಪ್ರಶಸ್ತಿ” ಪ್ರದಾನ
ಬಂಟ್ವಾಳ : ದೇವರ ಪ್ರಾರ್ಥನೆಯ ಮೂಲಕ ಮನಸ್ಸಿನ ಕ್ಲೇಶಗಳು ದೂರವಾದರೆ ಅದುವೇ ನಮ್ಮ ಬದುಕಿಗೆ ನಿಜವಾದ ಅಲಂಕಾರ ಎಂದು ಸುಳ್ಯ ರೋಟರಿ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ನಳಿನಾಕ್ಷಿ ವಿ.ಆಚಾರ್ಯ ಹೇಳಿದರು.
ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಶಾರದಾ ಪೂಜಾ ಉತ್ಸವ ಸಮಿತಿಯ ನೇತೃತ್ಬದಲ್ಲಿ ಕಲ್ಲಡ್ಕ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಶಾಂತಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಹಬ್ಬದ ಸಂತೋಷವನ್ನು ಹಂಚಿ ಸಾರ್ವಜನಿಕವಾಗಿ ಸಂಭ್ರಮಿಸುವುದರ ಹಿಂದೆ ಸಂಘಟನಾ ಶಕ್ತಿ ಜಾಗೃತವಾಗಬೇಕು ನಿಜವಾದ ಆಶೋತ್ತರ ಅಡಗಿದೆ. ಇದು ನಿರಂತರವಾಗಿರಬೇಕು ಎಂದವರು ಹೇಳಿದರು.
ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ। ಸುಕೇಶ್ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಆಚರಣೆಗಳು ಹೆಚ್ಚು ಹೆಚ್ಚು ನಡೆಯುವುದರ ಜೊತೆಗೆ ಸನಾತನ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ನಡೆಸುವವರಿಗೂ ತಕ್ಕಪಾಠ ಕಲಿಸುವಂತೆ ಕರೆ ನೀಡಿದರು.
ಗೋಳ್ತಮಜಲು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ ಮಾತನಾಡಿ, ಸಾರ್ವಜನಿಕ ಆಚರಣೆಗಳ ಜೊತೆಯಲ್ಲಿ ಮನೆಮನೆಗಳಲ್ಲಿಯೂ ನಮ್ಮ ಸಂಪ್ರದಾಯ, ಆಚರಣೆಗಳಿಗೆ ಮಹತ್ವ ಸಿಗಬೇಕು ಎಂದರು.
ಶಾಂತಶ್ರೀ ಪ್ರಶಸ್ತಿ ಪ್ರದಾನ
ಪ್ರತಿಷ್ಠಾನದ ವತಿಯಿಂದ ಕೆ. ಶಾಂತರಾಮ ಆಚಾರ್ ಸ್ಮರಣಾರ್ಥ ನೀಡಲಾಗುವ ‘ಶಾಂತಶ್ರೀ’ ಪ್ರಶಸ್ತಿ ಯನ್ನು ಕಲಾಸೇವೆ ಕ್ಷೇತ್ರದಲ್ಲಿ ಶಿಲ್ಪಾ ಗೊಂಬೆ ಬಳಗದ ಮಾಲಕ ರಮೇಶ್ ಕಲ್ಲಡ್ಕ ರವರಿಗೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ನನ್ನ ಹುಟ್ಟೂರಿನಲ್ಲಿ, ನಾನು ಕಲಿತ ಶಾಲೆಯಲ್ಲಿ ,ನನ್ನ ಅಣ್ಣನ ಹೆಸರಿನಲ್ಲಿ ಸ್ವೀಕರಿಸಿರುವ ಈ ಪ್ರಶಸ್ತಿ ಎಲ್ಲ ಪ್ರಶಸ್ತಿಗಿಂತಲೂ ಹೆಚ್ಚು ಮೌಲ್ಯದ್ದು ಎಂದರು.
ಕಾರ್ಯಕ್ರಮದಲ್ಲಿ ನರಸಿಂಹ ಮಡಿವಾಳ ರವರಿಗೆ ಗ್ರಾಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಾರ್ನಬೈಲು ಬಜಾರ್ ಗ್ರೂಪ್ ಮಾಲಕರಾದ ಲ| ಸುಧಾಕರ ಆಚಾರ್ಯ ಶುಭಹಾರೈಸಿದರು. ಬಿರುವೆರ್ ಕುಡ್ಲ ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿರಣ್ ರಾಜ್ , ಕಲ್ಲಡ್ಕ ಝಾನ್ಸಿ ರಾಣಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಆರ್. ಪೂಜಾರಿ, ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷ ಯೋಗಿಶ್ ಪೂಜಾರಿ, ಕಾರ್ಯದರ್ಶಿ ಪ್ರಮಿತ್ ಶೆಟ್ಟಿ ಕುಕ್ಕಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಯತಿನ್ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ದಿನೇಶ್ ಕೃಷ್ಣಕೋಡಿ ಪ್ರತಿಭಾ ಪುರಸ್ಕೃತರನ್ನು ಪರಿಚಯಿಸಿದರು. ರಾಜೇಶ್ ಕೊಟ್ಟಾರಿ ಕೊಳಕೀರು ಕಾರ್ಯಕ್ರಮ ನಿರ್ವಹಿಸಿದರು.