70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ (70th National Film Awards) (ಅ.8) ದೆಹಲಿಯಲ್ಲಿ ನಡೆದಿದೆ. ಕನ್ನಡದ ಪ್ರತಿಭೆಗಳಾದ ರಿಷಬ್ ಶೆಟ್ಟಿ, ನಿತ್ಯಾ ಮೆನನ್ ಅವರು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ (Kantara) ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ (Rishab Shetty) ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ ‘ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದ್ದು, ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.

‘ಮಧ್ಯಂತರ’ ಸಿನಿಮಾಗಾಗಿ ಬೆಸ್ಟ್ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈ. ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್ ಅರಸ್‌ಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕನ್ನಡದ ನಟಿ ನಿತ್ಯಾ ಮೆನನ್‌ಗೆ ‘ತಿರುಚಿತ್ರಂಬಲಂ’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

ಈ ವೇಳೆ, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಸುನೀಲ್ ಪುರಾಣಿಕ್, ಕರಣ್ ಜೋಹರ್, ನಿಖಿಲ್ ಸಿದ್ಧಾರ್ಥ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ಕನ್ನಡದ ಚಿತ್ರರಂಗದ ಕೀರ್ತಿಯ ಕ್ಷಣ. ‘ಕಾಂತಾರ’ ಸಿನಿಮಾಗಾಗಿ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಖುಷಿಯಿದೆ. ‘ಕಾಂತಾರ’ ಚಿತ್ರದ ಈ ಪ್ರಯಾಣದ ಪ್ರತಿಯೊಂದು ಹಂತವು ಸ್ಪೆಷಲ್‌ ಆಗಿತ್ತು. ಇನ್ನೂ ನಮ್ಮ ಕೆಲಸವನ್ನು ಗುರುತಿಸಿದ ತೀರ್ಪುಗಾರರಿಗೆ ಧನ್ಯವಾದಗಳು ಎಂದು ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.