ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ “ಮುಖ್ಯಮಂತ್ರಿಗಳ ಆಪತ್ಕಾಲ ಯಾನ ಸೇವೆ”ಯ 65 ಆಧುನಿಕ ಜೀವ ರಕ್ಷಕ ಸವಲತ್ತುಗಳಿರುವ ಆ್ಯಂಬುಲೆನ್ಸ್ ಗಳನ್ನು ಸಿ.ಎಂ.ಸಿದ್ಧರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿ ಅಪಘಾತದ ಸಂದರ್ಭದಲ್ಲಿ ಗೋಲ್ಡರ್ ಹವರ್ ಬಹಳ ಮುಖ್ಯ. ಈ ಒಂದು ಗಂಟೆಯಲ್ಲಿ ಅಗತ್ಯ ತುರ್ತು ಚಿಕಿತ್ಸೆ ಸಿಕ್ಕರೆ ನೂರಾರು ಪ್ರಾಣಗಳನ್ನು ಉಳಿಸಲು ಸಾಧ್ಯವಿದೆ. ಈ ಪ್ರಾಣ ಉಳಿಸುವ ಕಾರ್ಯಕ್ಕೆ ಈ ಆ್ಯಂಬುಲೆನ್ಸ್ ಗಳು ನೆರವಾಗಲಿವೆ.
ಸದ್ಯ 65 ಆಧುನಿಕ ಮತ್ತು ಪ್ರಾಥಮಿಕ ಆ್ಯಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಆಧುನಿಕ ಸವಲತ್ತುಗಳಿರುವ ಆ್ಯಂಬುಲೆನ್ಸ್ ಗಳನ್ನು ವಿಸ್ತರಿಸಲಾಗುವುದು ಎಂದರು.
ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು ಸಂಭವಿಸುವುದೇ ಇಲ್ಲ. ಯುವಜನರು ಕುಡಿದು ವಾಹನ ಓಡಿಸುವುದನ್ನು ನೂರಕ್ಕೆ ನೂರರಷ್ಟು ನಿಲ್ಲಿಸಿ, ನಿಮ್ಮ ಕುಟುಂಬಗಳನ್ನು ಅನಾಥ ಮಾಡಬೇಡಿ.
ಮೊಬೈಲ್ನಲ್ಲಿ ಮಾತಾಡಿಕೊಂಡು ವಾಹನ ಓಡಿಸಿದರೆ ಅಪಘಾತಗಳಾಗದೆ ಇರುತ್ತದೆಯಾ? ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ನಿಮ್ಮ ಕುಟುಂಬಕ್ಕೆ ನೀವೇ ಜವಾಬ್ದಾರಿ. ಆದ್ದರಿಂದ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.
ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವವರ, ಕುಡಿದು ವಾಹನ ಚಲಾಯಿಸುವರ ಚಾಲನಾ ಪರವಾನಗಿಯನ್ನು ರದ್ದು ಮಾಡಬೇಕು ಎಂದು ಸಾರಿಗೆ ಇಲಾಖೆಗೆ ಈ ವೇದಿಕೆಯಲ್ಲೇ ಸೂಚಿಸುತ್ತಿದ್ದೇನೆ.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ ಸೇರಿ ಹಲವು ನಾಯಕರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.