ಬೈರುತ್: ಲೆಬನಾನ್‌ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸಂಘಟನೆ ಸದಸ್ಯರ ಮೇಲೆ ರಹಸ್ಯ ದಾಳಿ ನಡೆದಿದೆ. ಉಗ್ರರು ಸಂವಹನಕ್ಕಾಗಿ ಬಳಸುತ್ತಿದ್ದ ಪೇಜರ್‌ ಸಾಧನವೇ ಸ್ಫೋಟಗೊಂಡು ಕನಿಷ್ಟ 8 ಮಂದಿ ಸಾವನ್ನಪ್ಪಿ 2 ಸಾವಿರಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಲೆಬನಾನ್‌ನಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಈ ಸ್ಫೋಟ ಸಂಭವಿಸಿದೆ. ದಾಳಿಯ ಪರಿಣಾಮ ರಸ್ತೆಯಲ್ಲಿ, ತರಕಾರಿ ಮಾರುಕಟ್ಟೆ, ಕಾರಿನಲ್ಲಿದ್ದ ಸದಸ್ಯರು ಅಲ್ಲೇ ಕುಸಿದು ಬಿದ್ದಿದ್ದಾರೆ. ಲೆಬನಾನ್‌ನಲ್ಲಿದ್ದ ಇರಾನ್‌ ರಾಯಭಾರಿ ಸಹ ಗಾಯಗೊಂಡಿದ್ದಾರೆ.

ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಎರಡರಿಂದಲೂ ನಿಷೇಧಿಸಲ್ಪಟ್ಟ ಹಿಜ್ಬುಲ್ಲಾ ಸಂಘಟನೆ ಲೆಬನಾನ್‌ನಲ್ಲಿ ರಾಜಕೀಯ ಮತ್ತು ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದ್ದು ಇರಾನ್‌ನಿಂದ ಬೆಂಬಲಿತವಾಗಿದೆ. ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಇಸ್ರೇಲ್‌ನೊಂದಿಗೆ ಯುದ್ಧ ಮಾಡುತ್ತಿರುವ ಹಮಾಸ್ ಸಂಘಟನೆಯನ್ನು ಹಿಜ್ಬುಲ್ಲಾ ಬೆಂಬಲಿಸುತ್ತಿದೆ.

ಕೆಲ ವರದಿಗಳು ಸೈಬರ್ ದಾಳಿಯಿಂದಾಗಿ ಲಿಥಿಯಂ ಬ್ಯಾಟರಿಗಳಿಂದ ಸ್ಫೋಟಗಳು ಸಂಭವಿಸಿವೆ ಎಂದರೆ ಕೆಲವು ವರದಿಗಳು ಪೇಜರ್‌ಗಳ ಒಳಗೆ ಸ್ಫೋಟಕಗಳ ತೆಳುವಾದ ಲೈನಿಂಗ್ ಇರಿಸಲಾಗಿತ್ತು ಎಂದು ತಿಳಿಸಿವೆ.

ಈ ಕೃತ್ಯದ ಹಿಂದೆ ಇಸ್ರೇಲ್‌ ಕೈವಾಡವಿದೆ. ರಿಮೋಟ್‌ ಬಳಸಿ ಎಲ್ಲಾ ಪೇಜರ್‌ಗಳು ಒಂದೇ ಸಮಯದಲ್ಲಿ ಸ್ಫೋಟಗೊಳಿಸಲಾಗಿದೆ ಎಂದು ಹಿಜ್ಬುಲ್ಲಾ ಆರೋಪಿಸಿದೆ. ಹೊಸ ಪೇಜರ್‌ಗಳು ಈಗ ಸ್ಫೋಟಗೊಂಡಿದ್ದು ಎಲ್ಲ ಪೇಜರ್‌ಗಳನ್ನು ದೂರಕ್ಕೆ ಎಸೆಯಿರಿ ಎಂದು ಹಿಜ್ಬುಲ್ಲಾ ತನ್ನ ಸದಸ್ಯರಿಗೆ ಸೂಚಿಸಿದೆ.