ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ 40ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಅರಣ್ಯ ಇಲಾಖೆ ದಾಖಲೆಗಳನ್ನು ನೀಡುವಂತೆ ನೋಟಿಸ್ ನೀಡಿದೆ.

2015 ರಿಂದ ಈಚೆಗೆ ಮಲೆನಾಡು ಭಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿ ಹೋಂ ಸ್ಟೇ, ರೆಸಾರ್ಟ್, ಮನೆ, ತೋಟ ನಿರ್ಮಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಆದೇಶಿಸಿದ್ದರು. ಅರಣ್ಯ ಸಚಿವರ ಆದೇಶದ ಬೆನ್ನಲ್ಲೇ ಚಿಕ್ಕಮಗಳೂರು ಅರಣ್ಯ ಇಲಾಖೆ 40ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದೆ.

ಚಿಕ್ಕಮಗಳೂರು, ಮೂಡಿಗೆರೆ, ಮುತ್ತೋಡಿ, ಮುಳ್ಳಯ್ಯನಗಿರಿ ಭಾಗದ ಹೋಂ ಸ್ಟೇಗಳಿಗೆ ನೋಟಿಸ್ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕೃತವಾಗಿ 650ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿವೆ. ಆದರೆ ಸರ್ಕಾರದ ಅನುಮತಿ ಪಡೆಯದಂತಹ 800ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇಗಳಿವೆ. ಅದರಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಗುಡ್ಡಗಾಡು ಪ್ರದೇಶದಂತಹ ಎತ್ತರದ ಪ್ರದೇಶ ಹಾಗೂ ಗುಡ್ಡದ ತಪ್ಪಲಿನಲ್ಲೇ ಹೆಚ್ಚಾಗಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ನಿರ್ಮಿಸಿದ್ದಾರೆ.

ವಯನಾಡು ದುರಂತದ ಬಳಿಕ ಮುಂಜಾಗ್ರತ ಕ್ರಮವಾಗಿ ಸಚಿವರ ಆದೇಶದನ್ವಯ ಆರಂಭಿಕವಾಗಿ ಜಿಲ್ಲೆಯಲ್ಲಿರುವ 40 ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಆರಂಭಿಕ ಹಂತವಾಗಿ ದಾಖಲೆ ಸಲ್ಲಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇರುವಂತಹ ಎಲ್ಲಾ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. .