ಬಂಟ್ವಾಳ : ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ, ದೈಹಿಕ ಚತುರತೆ ಮತ್ತು ಮಾನಸಿಕ ಮನೋಬಲವನ್ನು ಹತೋಟಿಯಲ್ಲಿಡಲು ಉತ್ತಮ ಉದಾಹರಣೆಯಾಗಿದೆ. ಎಂದು ಗೋಳ್ತಮಜಲು ಸರಕಾರಿ ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಟೈಲರ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಗೋಳ್ತಮಜಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟದ ಹಾಗೂ ನೂತನ ವಿವೇಕ ಕೊಠಡಿ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಜಾಜ್ ಸಮೂಹ ಸಂಸ್ಥೆಯ ಹನೀಫ್ ಹಾಜಿ ಮಾತನಾಡಿ ಕಬಡ್ಡಿಯೂ ಇಂದು ಹಳ್ಳಿಹಳ್ಳಿಯ ಮೂಲೆ ಮೂಲೆಗಳಲ್ಲಿಯೂ ಬೆಳವಣಿಗೆ ಹೊಂದಿ ಉತ್ತಮವಾದ ಕ್ರೀಡೆಯಾಗಿ ಹೊರಹೊಮ್ಮುತ್ತಿದೆ. ಪ್ರಾಥಮಿಕ ಶಾಲೆಗಳಲ್ಲಿ ಕಬಡ್ಡಿಯ ಬಗ್ಗೆ ಆಸಕ್ತಿಯನ್ನು ಬೆಳೆಸುವುದರಿಂದ ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಸಾಧ್ಯ ಈ ಮುಖೇನ ಕಬಡ್ಡಿಯ ಬಗ್ಗೆ ಗೋಳ್ತಮಜಲು ಪರಿಸರ ಹೊಂದಿದ ಗತವೈಭವ ಮರು ಕಳಿಸಲಿ ಎಂದು ಆಶಿಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಹಜಾಜ್ ಸಮೂಹ ಸಂಸ್ಥೆಯ ಪಾಲುದಾರ ಮಹಮದ್ ಯೂಸೂಫ್ ಕಬಡ್ಡಿ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಕಲ್ಲಡ್ಕ ವಲಯದ ಪ್ರಾಥಮಿಕ ಶಾಲೆಗಳ 19 ಬಾಲಕರ ಹಾಗೂ7 ಬಾಲಕಿಯರ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಶಾಲೆಗೆ ಹೊಸದಾಗಿ ನಿರ್ಮಾಣವಾದ ವಿವೇಕ ಕೊಠಡಿಯನ್ನು ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ ಜಯಂತಿ, ಹಾಗೂ ಶಾಲೆಯಿಂದ ವರ್ಗಾಣೆಗೊಂಡ ಶಿಕ್ಷಕಿ ದೇವಕಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲಾ ಹಿರಿಯ ವಿದ್ಯಾರ್ಥಿಗಳ ಪರವಾಗಿ ಶಾಲಾ ಮುಖ್ಯ ಶಿಕ್ಷಕಿ ಸುಮಾ ಎಸ್ ರವರನ್ನು ಗೌರವಿಸಲಾಯಿತು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ, ಹಾಗೂ ಕಬಡ್ಡಿ ಕ್ರೀಡಾಕೂಟ ನಡೆಸಲು ವಿಶೇಷವಾಗಿ ಸಹಕರಿಸಿದವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಮಾಣಿ, ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರಾಥಮಿಕ ಶಾಲೆ, ಬೋಳಂತೂರು, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪ್ರಾಥಮಿಕ ಶಾಲೆ ಕಾರ್ಲಾ, ದ್ವಿತೀಯ ಸ್ಥಾನವನ್ನು ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಕ್ರಮವಾಗಿ ಪಡೆದುಕೊಂಡವು.
ಕಾರ್ಯಕ್ರಮದಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ್ ಗೌಡ, ಸದಸ್ಯರಾದ ಪುರುಷೋತ್ತಮ, ಹಾರಿಸ್ ಅಮರ್, ನಳಿನಿ, ಸರೋಜಿನಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ,ಸದಸ್ಯರಾದ ಮಹಾಬಲ ಆಳ್ವಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಮೋನಪ್ಪ ದೇವಸ್ಯ, ಶೇಖರ ಕೊಟ್ಟಾರಿ, ಹಮಿದಾಲಿ,ಹಿರಿಯ ವಿದ್ಯಾರ್ಥಿ ಆನಂದ ಆಳ್ವಾ, ಕ್ರೀಡಾಕೂಟದ ಕಲ್ಲಡ್ಕ ವಲಯ ನೊಡೆಲ್ ಅಧಿಕಾರಿ ಜಗದೀಶ್ ಕೆ, ಹಿರಿಯರಾದ ಸುಂದರ ಶೆಟ್ಟಿ, ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಮಾಧವ ಸಾಲಿಯಾನ್, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ,ಗೋಳ್ತಮಜಲು ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ನಾಯಕ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್, ಹಿರಿಯ ವಿದ್ಯಾರ್ಥಿ ಸಂಘದ ಇರ್ಷಾದ್, ಮತ್ತು ಅವರ ತಂಡ, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಶಾಲಾ ಮುಖ್ಯ ಶಿಕ್ಷಕಿ ಸುಮಾ ಎಸ್ ಸ್ವಾಗತಿಸಿ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣ ಅಧಿಕಾರಿ ಶಿವಪ್ರಸಾದ್ ಪ್ರಸ್ತಾವಿಕ ಮಾಡಿ, ಶಿಕ್ಷಕಿ ಸುವರ್ಣ ಶಂಕರ್ ವಂದಿಸಿ, ಶಂಕರ್ ವೆಂಕಪ್ಪ ಪಾವಸ್ಕರ್ ಹಾಗೂ ಇರ್ಫಾನ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚೈತ್ರ ಹಾಗೂ ಮೋನಪ್ಪ ಸಹಕರಿಸಿದರು.