ನಮ್ಮ ಕುಡ್ಲ ತುಳು ವಾಹಿನಿಯ ವರದಿಗಾರ, ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿ ಅವರ ‘ಸೂರ್ಯೆ ಚಂದ್ರೆ ಸಿರಿ’ ದೇವಕಿ ಬೈದ್ಯೆದಿ ಪಂಡ್‌ ನ ಜನಪದ ಕಥೆಕುಲು ಎಂಬ ತುಳು ಕೃತಿ ಬಿಡುಗಡೆ ಸಮಾರಂಭ ಮಂಗಳೂರಿನ ಉರ್ವ ಲೇಡಿಹಿಲ್‌ ಪತ್ರಿಕಾ ಭವನದಲ್ಲಿ ನಡೆಯಿತು.

ಆಕೃತಿ ಆಶಯ ಪಬ್ಲಿಕೇಶನ್‌ ಪ್ರಕಟಿಸಿದ ಈ ಕಥಾ ಸಂಕಲನವನ್ನು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಬಿಡುಗಡೆ ಮಾಡಿದರು.

ಶಾಸನ ಆಧಾರಿತ ಇತಿಹಾಸವು ಬಹುತೇಕವಾಗಿ ಆಯಾ ಕಾಲದ ಅರಸನ ನೇತೃತ್ವದಲ್ಲಿ ರಚಿತವಾಗಿರುತ್ತದೆ. ಆದರೆ ಜಾನಪದವು ಬಹು ಸಂಖ್ಯೆಯ ಜನ ಸಾಮಾನ್ಯರ ಮೌಖಿಕ ಸಾಹಿತ್ಯವಾಗಿದ್ದು, ಅದು ಚರಿತ್ರೆಯಾಗಿ ದಾಖಲಾದಾಗ ಮೌಲ್ಯಯುತವಾಗಿರುತ್ತದೆ.

ತುಳು ನಾಡಿನಲ್ಲಿ ಕೃಷಿ ಬದುಕು ನಿತ್ಯದ ಕಾಯಕವಾಗಿತ್ತು. ಆದರೆ ಇಂದು ಅದರಿಂದ ದೂರ ಸರಿಯುತ್ತಿದ್ದೇವೆ. ಭತ್ತ, ಅಕ್ಕಿ ಬಗೆಗಿನ ತುಳುನಾಡಿನ ನಂಬಿಕೆ, ಆರಾಧನಾ ಭಾವ ಹೆಚ್ಚಿನವರಿಗೆ ತಿಳಿದಿಲ್ಲ. ಅವುಗಳು ಕೃತಿಯ ರೂಪದಲ್ಲಿ ಮೂಡಿ ಬಂದಾಗ ಅದು ಇತಿಹಾಸವಾಗಿ ಮುಂದಿನ ಜನಾಂಗಕ್ಕೂ ತಿಳಿಯಲು ಅನುಕೂಲವಾಗುತ್ತದೆ.

ಈ ನಿಟ್ಟಿನಲ್ಲಿ ರಘುನಾಥ ವರ್ಕಾಡಿ ಅವರ ಕಾರ್ಯ ಸ್ತುತ್ಯಾರ್ಹ. ತಮ್ಮ ತಾಯಿ ಹೇಳಿದ 30 ಕಥೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಕಾರ್ಯವನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.

ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಪ್ರೊಫೆಸರ್‌ ಎಂ.ಎಸ್. ಕೋಟ್ಯಾನ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ನೀಲಯ ಎಂ. ಅಗರಿ, ನಮ್ಮ ಕುಡ್ಲ ವಾಹನಿಯ ನಿರ್ದೇಶಕ ಸುರೇಶ್‌ ಬಿ. ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು.

ಲೇಖಕ ರಘುನಾಥ ಎಂ. ವರ್ಕಾಡಿ ಸ್ವಾಗತಿಸಿ ವಂದಿಸಿದರು.