ಮಲಯಾಳಂ ಸಿನಿಮಾ ರಂಗದ ನಟ ಮೋಹನ್ ಲಾಲ್ ಸೇನಾ ಸಮವಸ್ತ್ರ ಧರಿಸಿ ವಯನಾಡಿನ ದುರಂತ ಸ್ಥಳಕ್ಕೆ ಬಂದಿದ್ದಾರೆ. ಸೇನಾ ಶಿಬಿರಕ್ಕೆ ಮೊದಲು ಆಗಮಿಸಿದ್ದ ಮೋಹನ್ ಲಾಲ್ ಆರ್ಮಿ ಮಾಡ್ತಿರೋ ಕೆಲಸವನ್ನು ಶ್ಲ್ಯಾಘಿಸಿದ್ದಾರೆ. ಜೊತೆಗೆ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ನಡೆಯುತ್ತಿರುವ ಕಾರ್ಯಚರಣೆಯನ್ನು ವೀಕ್ಷಿಸಿದ್ದಾರೆ.
ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರೋ ಮೋಹನ್ ಲಾಲ್, ತನ್ನದೇ ಸೇನೆ ಅಲ್ಲಿ ಕೆಲಸ ಮಾಡುತ್ತಿರುವುದರಿಂದ ಸೇನಾ ಸಮವಸ್ತ್ರದಲ್ಲೇ ಆಗಮಿಸಿದ್ದರು. ಅಲ್ಲಿನ ಸೇನಾ ಮುಖ್ಯಸ್ಥರು ಮತ್ತು ಸೈನಿಕರ ಕೆಲಸವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಜೊತೆಗೆ ವಯನಾಡಿನ ನೋವಿಗೆ ವೈಯಕ್ತಿಕವಾಗಿ ಸ್ಪಂದಿಸುವ ಕುರಿತು ಅವರು ಮಾತನಾಡಿದ್ದಾರೆ.
ಈಗಾಗಲೇ ಮೂರು ಕೋಟಿಗೂ ಅಧಿಕ ಹಣವನ್ನು ಪರಿಹಾರ ನಿಧಿಗೆ ನೀಡಿರುವ ಮೋಹನ್ ಲಾಲ್, ಇನ್ನೂ ಸಹಾಯ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ದುರಂತದಲ್ಲಿ ಮಡಿದ ಕುಟುಂಬಗಳಿಗೆ ಧೈರ್ಯ ಹೇಳುವಂತಹ ಕೆಲಸವನ್ನೂ ಮೋಹನ್ ಲಾಲ್ ಮಾಡಿದ್ದಾರೆ. ಮೋಹನ್ ಲಾಲ್ ಕಾರ್ಯಕ್ಕೆ ಸಾಕಷ್ಟು ಜನರು ಶ್ಲ್ಯಾಘನೆ ವ್ಯಕ್ತ ಪಡಿಸಿದ್ದಾರೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ಭೀಕರ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕೆ ಸಿನಿಮಾ ನಟ, ನಟಿಯರು ಮುಂದಾಗಿದ್ದಾರೆ.
ವಯನಾಡು ಭೂಕುಸಿತ ದುರಂತದಲ್ಲಿ ಸಂಕಷ್ಟದಲ್ಲಿರುವರಿಗೆ ನೆರವಾಗಲು ಲಕ್ಷ ಲಕ್ಷ ಹಣವನ್ನು ಕೇರಳದ ಸಿಎಂ ಫಂಡ್‌ಗೆ ಸೌತ್ ನಟ, ನಟಿಯರು ದೇಣಿಗೆ ನೀಡಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ತಮಿಳು ನಟ ಸೂರ್ಯ, ಚಿಯಾನ್ ವಿಕ್ರಮ್, ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನೆರವಿಗೆ ಬಂದಿದ್ದಾರೆ.
ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕಾರ್ಯವೊಂದಕ್ಕಾಗಿ ಅತಿಥಿಯಾಗಿ ಕೇರಳಕ್ಕೆ ಆಗಮಿಸಿದ್ದರು. ಆಗ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅವರ ಪ್ರೀತಿ ನೋಡಿ ನಟಿ ಧನ್ಯವಾದ ತಿಳಿಸಿದ್ದರು. ಇದೀಗ ಕೇರಳದಲ್ಲಿ ಆಗಿರುವ ಭೂಕುಸಿತ ದುರಂತ ಕಂಡು ಅಲ್ಲಿನ ಸಿಎಂ ಫಂಡ್‌ಗೆ ನಟಿ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟಿಯ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.