ಮಂಗಳೂರು: ನಿಫಾ ವೈರಸ್ ಬಾಧಿಸಿದ್ದ ಕೇರಳದ ರೋಗಿಗೆ ಆರೈಕೆ ನೀಡಿದ್ದ ದಕ್ಷಿಣ ಕನ್ನಡ ಮೂಲದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ 8 ತಿಂಗಳಿನಿಂದ‌ ಕೋಮಾದಲ್ಲಿದ್ದಾರೆ‌‌.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಬಳಿಯ ತುಂಬ್ಯ ನಿವಾಸಿ 24 ವರ್ಷದ ಟಿಟ್ಟೋ ತೋಮಸ್ ಇದೀಗ ಕೋಮಾಗೆ ಜಾರಿದ್ದಾರೆ.

ಬಿಎಸ್‌ಸಿ ನರ್ಸಿಂಗ್ ಪದವೀಧರರಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ ಇಂಟರ್ನ್ಯಾಷನಲ್ ಹಾಸ್ಪಿಟಲ್‌ ಆ್ಯಂಡ್ ರಿಸರ್ವ್ ಸೆಂಟರ್ ನಲ್ಲಿ‌ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

2023 ರ ಸೆಪ್ಟೆಂಬರ್ ನಲ್ಲಿ ನಿಫಾ ವೈರಸ್ ಬಾಧಿತ ರೋಗಿಯ ಆರೈಕೆ ಮಾಡಿದ್ದರು. ಬಳಿಕ ಕ್ವಾರಂಟೈನ್‌ನಲ್ಲಿದ್ದ ತೋಮಸ್ ಗೆ ಎರಡು ತಿಂಗಳ‌ ಬಳಿಕ ವಿಪರೀತ ತಲೆನೋವು ಆರಂಭವಾಗಿದ್ದು, ಸ್ಕ್ಯಾನಿಂಗ್ ನಡೆಸಿದಾಗ ಮಿದುಳಿನ‌ ಸ್ಟ್ರೋಕ್ ಆಗಿರೋದು ಬೆಳಕಿಗೆ ಬಂದಿದೆ.

ಚಿಕಿತ್ಸೆಗೆ ಸ್ಪಂದಿಸದೇ ಮಾರನೇ ದಿನವೇ ಕೋಮಕ್ಕೆ ಹೋಗಿದ್ದರು. ಕಳೆದ ಎಂಟು ತಿಂಗಳಿನಿಂದ‌ ಆಸ್ಪತ್ರೆಯ ಆಡಳಿತ‌ ಮಡಳಿಯ ವತಿಯಿಂದಲೇ‌ ಚಿಕಿತ್ಸೆ ನೀಡುತ್ತಿದ್ದು, ಸುಮಾರು 40‌ ಲಕ್ಷ ರೂ. ಖರ್ಚನ್ನು ಭರಿಸಿದೆ. ಆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಹೀಗಾಗಿ ಬೇರೆ ಆಸ್ಪತ್ರೆಗೆ ಹೆಚ್ಚಿನ ದಾಖಲಿಸಿ ಚಿಕಿತ್ಸೆ ನೀಡಲು ಆಗ್ರಹಿಸಿ ಕುಟುಂಬಸ್ಥರು ಕೇರಳ ಸರ್ಕಾರದ ಮೊರೆ ಹೋಗಿದ್ದಾರೆ.