ಬೆಂಗಳೂರು: ನೀವೆಲ್ಲಾ ಮೊಟ್ಟೆ ತಿನ್ನುತ್ತೀರಿ, ನಾನಂತೂ ಮೊಟ್ಟೆ ತಿನ್ನಲ್ಲ, ಮುಟ್ಟೋದೂ ಇಲ್ಲ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಪ್ರಶ್ನೋತ್ತರ ಕಲಾಪದ ವೇಳೆ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಮೊಟ್ಟೆ ಪೂರೈಕೆ ಮಾಡಬೇಕೆನ್ನುವ ವಿಚಾರ ಚರ್ಚೆ ನಡೆಯುತ್ತಿದ್ದ ವೇಳೆ ಹಾಸ್ಯ ಪ್ರಸಂಗವೊಂದು ನಡೆಯಿತು.

ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಅಂಗನವಾಡಿಗಳಲ್ಲಿ ಆಹಾರ ಸರಿಯಿಲ್ಲ. ಕೆಟ್ಟಿರುವ ಮೊಟ್ಟೆಗಳನ್ನ ಕೊಡ್ತಿದ್ದಾರೆ. ಹಾಲು ಸರಿಯಾಗಿಲ್ಲ. ಬಾಳೆಹಣ್ಣು ಇಲ್ಲ, ಶೇಂಗಾ ಕಡಲೆ ಕೊಡ್ತಿಲ್ಲ. ಹುಳು ಬಿದ್ದ ಆಹಾರ ನೀಡ್ತಿದ್ದಾರೆ. ಆಹಾರ ಕಳೆಪಯಾಗಿದೆ, ಇದಕ್ಕೆ ಸರ್ಕಾರ ಏನು ಕ್ರಮ ಕೈಗೊಂಡಿದೆ? ಅಂತ ಪ್ರಶ್ನಿಸಿದರು. ಈ ವೇಳೆ ಅಂಗನವಾಡಿಗಳಲ್ಲಿ ತಯಾರು ಮಾಡುವ ಆಹಾರ ಪದಾರ್ಥಗಳ ಪೊಟ್ಟಣ ತೋರಿಸಲು ಮುಂದಾದರು. ಕೊನೆಗೆ ಸದನದಲ್ಲಿ ಇದೆಲ್ಲವನ್ನು ತರುವಂತಿಲ್ಲ ಅಂತ ಸಭಾಪತಿಗಳು ಸೂಚಿಸಿದರು.

ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಲು ಮುಂದಾದ ಲಕ್ಷ್ಮಿ ಹೆಬ್ಬಾಳ್ಕರ್, ನೀವೆಲ್ಲಾ ಮೊಟ್ಟೆ ತಿನ್ನುತ್ತೀರಿ, ನಾನಂತೂ ತಿನ್ನಲ್ಲ. ಮೊಟ್ಟೆ ಮುಟ್ಟೋದು ಇಲ್ಲ ಎಂದು ಹೇಳಿದರು. ಇದಕ್ಕೆ ಕಾಲೆಳೆದ ಸಭಾಪತಿಗಳು `ಒಮ್ಮೆ ತಿಂದು ನೋಡ್ರಿ, ಟೇಸ್ಟ್ ಗೊತ್ತಾಗುತ್ತೆ’ ಅಂತ ಹಾಸ್ಯ ಚಟಾಕಿ ಹಾರಿಸಿದರು. ಕೆಲ ಕ್ಷಣ ಪರಿಷತ್ ಸದಸ್ಯರು ನಗೆಗಡಲಲ್ಲಿ ತೇಲಿದರು.

ಬಳಿಕ ಕಳಪೆ ಆಹಾರ ಪೂರೈಕೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ನಾವು ಸ್ಥಳೀಯವಾಗಿ ಮೊಟ್ಟೆ ಖರೀದಿ ಮಾಡುತ್ತೇವೆ. ಮಾರ್ಕೆಟ್ ನಲ್ಲಿ 8 ರೂಪಾಯಿ ಇದೆ. ಸೃಷ್ಟಿ ಯೋಜನೆ ಅಡಿ ಮೊಟ್ಟೆ ಕೊಡಲಾಗ್ತಿದೆ. ಮಕ್ಕಳಿಗೆ ಪೌಷ್ಟಿಕಾಂಶ ನೀಡಲು ಮೊಟ್ಟೆ ಕೊಡ್ತಿದ್ದೇವೆ. ಕಳೆದ 8 ವರ್ಷಗಳಿಂದ ಒಂದು ಮಗುವಿಗೆ 8 ರೂಪಾಯಿ ಮಾತ್ರ ಕೇಂದ್ರ ಸರ್ಕಾರ ಕೊಡ್ತಿದೆ. ಕೇಂದ್ರ ಸರ್ಕಾರ ಬೆಲೆ ಪರಿಷ್ಕರಣೆ ಮಾಡಿಲ್ಲ. ಆದರೂ ನಾವು ಗುಣಮಟ್ಟದ ಮೊಟ್ಟೆ, ಆಹಾರ ನೀಡಲು ಕ್ರಮವಹಿಸುತ್ತಿದ್ದೇವೆ. ಎಲ್ಲಾದ್ರು ಇಂತಹ ಸಮಸ್ಯೆ ಆಗಿದ್ರೆ ಕ್ರಮ ತೆಗೆದುಕೊಳ್ತೀವಿ ಎಂದು ಉತ್ತರಿಸಿದರು.

ಇದೇ ವೇಳೆ ಅಂಗನವಾಡಿ ಕಟ್ಟಡಗಳ ಸುರಕ್ಷತೆ ಬಗ್ಗೆಯೂ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ರಾಜ್ಯದಲ್ಲಿ ಒಟ್ಟು 69,919 ಅಂಗನವಾಡಿ ಕೇಂದ್ರಗಳಿವೆ. ಇದರಲ್ಲಿ 47,236 ಸ್ವಂತ ಕಟ್ಟಡದಲ್ಲಿ ಇವೆ. 12,653 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಇವೆ. 30 ವರ್ಷ ಮೇಲ್ಪಟ್ಟ ಅಂಗನವಾಡಿ ಕಟ್ಟಡ ಮತ್ತು ದುಸ್ಥಿತಿಯಲ್ಲಿರೋ ಕಟ್ಟಡಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಂಗನವಾಡಿ ಕೇಂದ್ರಗಳ ಕಲ್ಪನೆ ಪ್ರಾರಂಭವಾಗಿ 49 ವರ್ಷ ಆಗಿದೆ. ಇಂದಿರಾಗಾಂಧಿ ಅವರು ಅಂಗನವಾಡಿ ಕೇಂದ್ರ ಪ್ರಾರಂಭ ಮಾಡಿದ್ರು. ಈವರೆಗೂ ಯಾವುದೇ ಅನಾಹುತ ಆಗಿಲ್ಲ. 30 ವರ್ಷ ಮೇಲ್ಪಟ್ಟ ಕಟ್ಟಡಗಳನ್ನೂ ನಾನು ಶೀಘ್ರವೇ ತಪಾಸಣೆ ನಡೆಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.