ಬಂಟ್ವಾಳ : ‘ಮರಗಳು ಮನುಷ್ಯನಿಗೆ ಉಸಿರು ನೀಡುತ್ತವೆ. ಭೂಮಿಯ ಸಕಲ ಜೀವಜಾಲಗಳಿಗೂ ಹಸಿರಿನ ಅವಶ್ಯಕತೆಯಿದೆ. ಮರ-ಗಿಡ ಪ್ರಕೃತಿಯ ಪೋಷಣೆ ಕೇವಲ ಒಂದು ದಿನದ ಆಚರಣೆಯಾಗಿರದೆ, ಜೀವನಪೂರ್ತಿ ನಡೆಯುವ ಕರ್ತವ್ಯವಾಗಬೇಕು, ಇಲ್ಲವಾದರೆ ಮುಂದಿನ ಪೀಳಿಗೆಗೆ ಮರುಭೂಮಿಯಂತಹ ಭೂಮಿಯಲ್ಲಿ ಜೀವಿಸಬೇಕಾಗಬಹುದು. ಆದ ಕಾರಣ ಗಿಡಗಳನ್ನು ನೆಟ್ಟು, ಮರಗಳನ್ನು ಬೆಳೆಸಿ’ ಎಂದು ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಜೂಲಿ ಟಿ.ಜೆ. ಹೇಳಿದರು.

ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಜೂಲಿ ಟಿ.ಜೆ.

ಅವರು ಶಾಲೆಯ ಸ್ಕೌಟ್ಸ್, ಗೈಡ್ಸ್, ಕಬ್ಸ್ ಮತ್ತು ಬುಲ್‌ಬುಲ್ಸ್ ಘಟಕದ ವತಿಯಿಂದ ಆಯೋಜಿಸಿದ ‘ವನಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಪ ಪ್ರಾಂಶುಪಾಲೆ ಶ್ರೀಮತಿ ಪೂರ್ಣೇಶ್ವರಿ ಭಟ್ ಅವರು ಪರಿಸರ ಸಂರಕ್ಷಣೆಯ ಹಸಿರಿನ ಅಗತ್ಯತೆಯನ್ನು ತಿಳಿಸಿದರು. ಗಿಡಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ, ಪರಿಸರದ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಸ್ಕೌಟ್ ಮಾಸ್ಟರ್ ಶ್ರೀ ಹರೀಶ್ ಎಂ, ಗೈಡ್ ಕ್ಯಾಪ್ಟನ್ ಶ್ರೀಮತಿ ಕೇಶವತಿ, ಕಬ್ ಮಾಸ್ಟರ್ ಶ್ರೀಮತಿ ಯೋಗಿನಿ ಮತ್ತು ಫ್ಲಾಕ್ ಲೀಡರ್ ಶ್ರೀಮತಿ ಅನಿತಾ ಡಿಸೋಜ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಕೈಗೊಂಡರು. ಪಲ್ಲವಿ ಎಂ.ಕೆ. ನಿರೂಪಿಸಿ, ಪ್ರಾರ್ಥನಾ ಎಸ್.ರಾವ್ ವಂದಿಸಿದರು.