ಹೊಸ ಬಿಪಿಎಲ್ ಕಾರ್ಡ್ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿವೆ – ಸಿಎಂ ಕಳವಳ
ಬೆಂಗಳೂರು: ಅನರ್ಹರನ್ನು ಬಿಪಿಎಲ್ ಕಾರ್ಡ್ನಿಂದ ಕೈಬಿಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಜೊತೆಗೆ ಮೃತ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ನಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಗತಿ ಪರಿಶೀಲನಾ ಸಭೆ
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಪ್ರಧಾನ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 4,37,23,911 ಜನ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆದುಕೊಂಡಿದ್ದಾರೆ. 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಬಿಪಿಎಲ್ ಕಾರ್ಡ್ಗಳಿಗೆ 2.95 ಲಕ್ಷ ಅರ್ಜಿಗಳು ಬಂದಿವೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದ್ದರೂ, ಬಿಪಿಎಲ್ ಕಾರ್ಡ್ ಪ್ರಮಾಣ ಕಡಿಮೆಯಾಗದಿರಲು ಕಾರಣವೇನು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಮುಂದುವರಿದು ತಮಿಳುನಾಡಿನಲ್ಲಿ ಬಿಪಿಎಲ್ ಪ್ರಮಾಣ ಶೇ.40 ರಷ್ಟಿದೆ. ಈ ಕುರಿತು ಪರಿಶೀಲನೆ ನಡೆಸಿ, ಅನರ್ಹರನ್ನು ಕೈಬಿಡುವ ಕೆಲಸ ಮಾಡಬೇಕು. ಜೊತೆಗೆ ಮೃತ ಸದಸ್ಯರ ಹೆಸರುಗಳನ್ನು ರೇಷನ್ ಕಾರ್ಡ್ನಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಎಂ ಸಭೆಯ ಮುಖ್ಯಾಂಶಗಳು:
* ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಕಲಬುರಗಿ ಮಹಿಳಾ ಹಾಸ್ಟೆಲ್ಗೆ ಭೇಟಿ ನೀಡಿ ಹಾಸ್ಟೆಲ್ ಟ್ಯಾಂಕಿನ ಮೂಲಕ ಕಲುಷಿತ ನೀರಿನ ಸರಬರಾಜು ಆಗುತ್ತಿರುವ ಬಗ್ಗೆ ಬರೆದಿರುವ ಪತ್ರವನ್ನು ಸಿಎಂ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆ ಸಮಸ್ಯೆಯನ್ನು ಬಗೆಹರಿಸಿ ಈಗಾಗಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರಿಸಿದರು.
* ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆ ಪಡೆಯಲು ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಬೇಕು. ರಾಜ್ಯದಲ್ಲಿ 84,52,317 ಕುಟುಂಬಗಳ ಸುಮಾರು 5 ಕೋಟಿ ಜನರ ಸಮೀಕ್ಷೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
* ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆಗೆ ಸಾಸ್ಕ್ಫೋರ್ಸ್ ರಚಿಸಲಾಗಿದೆ. ಕಲುಷಿತ ನೀರು ಪರೀಕ್ಷೆಗೆ ಸಾಕಷ್ಟು ಪ್ರಮಾಣದಲ್ಲಿ ಕಿಟ್ ಲಭ್ಯವಿದೆ. ಪ್ರತೀ ಹೋಬಳಿಗೆ ಭೇಟಿ ನೀಡಿ ಪ್ರಮಾಣ ಪತ್ರ ಒದಗಿಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಇದುವರೆಗೆ 42,945 ಜನವಸತಿ ಪ್ರದೇಶಗಳಲ್ಲಿ ಜಂಟಿ ತಪಾಸಣೆ ನಡೆಸಲಾಗಿದೆ. ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಯೋಜನೆ ರೂಪಿಸಬೇಕು. ಈಗಾಗಲೇ ಅಂತಹ ಶುದ್ಧ ನೀರು ಘಟಕಗಳ ಪರಿಶೀಲನೆ ನಡೆಸಲಾಗಿದ್ದು, ಸಮರ್ಪಕ ಯೋಜನೆ ರೂಪಿಸಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು.