ಕಾರ್ಕಳ : ರಸ್ತೆಯಲ್ಲಿ ಶ್ವಾನ ಅಡ್ಡ ಬಂದ ಹಿನ್ನೆಲೆ ಬೈಕ್ ಪಲ್ಟಿಯಾಗಿ ನವವಿವಾಹಿತೆಯೊಬ್ಬಳು ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ನಡೆದಿದೆ.
ಕಾರ್ಕಳ ತೆಳ್ಳಾರು ನಿವಾಸಿ ನೀಕ್ಷಾ ಮೃತ ಮಹಿಳೆ. ಎರಡು ತಿಂಗಳ ಹಿಂದೆಯಷ್ಟೇ ವಿಶಾಲ್ ಎಂಬವರೊಂದಿಗೆ ದಾಂಪತ್ಯ ಬದುಕಿಗೆ ನೀಕ್ಷಾ ಕಾಲಿಟ್ಟಿದ್ದರು.
ಶುಕ್ರವಾರ ಮಧ್ಯಾಹ್ನದ ವೇಳೆಗೆ ನೀಕ್ಷಾ ಮಂಗಳೂರಿಗೆ ಹೊರಟಿದ್ದು, ಹೊಸ್ಮಾರು, ಶಿರ್ತಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸು ಏರಲೆಂದು ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಆ ವೇಳೆಗೆ ಈದು ಕ್ರಾಸ್ ಬಳಿಯಲ್ಲಿ ಬಸ್ಸು ಹೊರಟು ಹೋದುದರಿಂದ ಹೊಸ್ಮಾರು ಜಂಕ್ಷನ್‌ನಲ್ಲಿ ಬಸ್ಸು ಏರಲು ಸಲುವಾಗಿ ಬೈಕ್‌ನಲ್ಲಿ ಹೊಸ್ಮಾರು ಕಡೆಗೆ ಬರುತ್ತಿದ್ದರು.
ಹೊಸ್ಮಾರು ಸೇತುವೆ ಸಮೀಪ ರಸ್ತೆಗೆ ಅಡ್ಡವಾಗಿ ಶ್ವಾನ ಹಾದು ಹೋಗಿದ್ದು, ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಒಂದು ಬದಿಗೆ ಮಗುಚಿ ಬಿದ್ದಿದ್ದು, ಆ ವೇಳೆ ಸಹಸವಾರೆ ನೀಕ್ಷಾ ರಸ್ತೆಗೆ ಎಸೆಯಲ್ಪಟ್ಟು ತಲೆ ಭಾಗಕ್ಕೆ ತೀವ್ರ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.