ಬ್ರಹ್ಮಕಲಶೋತ್ಸವ ಊರಿನಲ್ಲಿ ಶಾಂತಿ ವಾತಾವರಣಕ್ಕೆ ಕಾರಣವಾಗುವ ಒಂದು ಧಾರ್ಮಿಕ ಕೆಲಸ. ಸಹಕಾರ ಮನೋಭಾವದಿಂದ ಎಲ್ಲರೂ ಒಗ್ಗೂಡಿ ಈ ಕಾರ್ಯ ನೆರವೇರಿಸಬೇಕು ಎಂದು ಮಂಗಳೂರು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಅವರು ಡಿ.31ರಂದು ಮಳಲಿ ಮಟ್ಟಿಯ ಜೋಗಿ ಮಠದ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 20ರಿಂದ 26ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ‘ಪುಣ್ಯೋತ್ಸವ’ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದೂ ಧರ್ಮ, ಸಂಸ್ಕೃತಿ ಉಳಿವಿನಲ್ಲಿ ಇಂತಹ ಕಾರ್ಯಗಳು ಮಹತ್ವದ್ದಾಗಿವೆ. ಹಿಂದೂಗಳ ನಂಬಿಕೆಗೆ ಪೆಟ್ಟು ಬಿದ್ದಾಗ ಒಗ್ಗೂಡಿ ಕೆಲಸ ಮಾಡುವ ಭಾವನೆ ಇಲ್ಲಿಂದಲೇ ಆರಂಭವಾಗಬೇಕು. ಈ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ ಮಾತನಾಡಿ, ಹಲವು ಬ್ರಹ್ಮಕಲಶೋತ್ಸವ ಕಣ್ತುಂಬಿಸಿಕೊಂಡಿರುವ ನಮಗೆ ಮಟ್ಟಿಯಲ್ಲಿ ಮತ್ತೊಂದು ಬ್ರಹ್ಮಕಲಶೋತ್ಸವ ನೋಡುವ ಭಾಗ್ಯ ಬಂದಿದೆ. ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿರುವ ಕಾಲಘಟ್ಟದಲ್ಲೇ ಇಲ್ಲೊಂದು ಪುಣ್ಯ ಕಾರ್ಯ ನಡೆಯುತ್ತಿದೆ ಎಂಬುದು ಹಿಂದೂಗಳಿಗೆ ಹೆಮ್ಮೆಯ ವಿಷಯ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಖರ ಜೋಗಿ ಮಾತನಾಡಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ದೇವಸ್ಥಾನದ ಆವರಣ ಗೋಡೆ ನಿರ್ಮಿಸಲು ಜಾಗ ದಾನ ಮಾಡಿದವರಿಗೆ ಕೃತಜ್ಞತೆ ಸಲ್ಲುತ್ತದೆ. ಬ್ರಹ್ಮಕಲಶೋತ್ಸವದ ಬಳಿಕ ಸಾನಿಧ್ಯದ ಕೆರೆ ಅಭಿವೃದ್ಧಿಗೊಳ್ಳಲಿದ್ದು, ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಶ್ರೀ ಕ್ಷೇತ್ರ ಮಟ್ಟಿ ಇದರ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ ಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ ಪೆರ್ಮಂಕಿಗುತ್ತು ಪ್ರಾಸ್ತಾವಿಕ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಸತೀಶ್ ಜೋಗಿ ಮಾಲೆಮಾರ್, ಕೋಶಾಧಿಕಾರಿ ಸೋಹನ್ ಅತಿಕಾರಿ ಭಾವಂತಿಬೆಟ್ಟು, ತಾ.ಪಂ. ಮಾಜಿ ಸದಸ್ಯ ಸುನಿಲ್ ಗಂಜಿಮಠ, ಭೋಜ ಮೇಂಡ, ವಿಶ್ವನಾಥ ಪೂಜಾರಿ, ಉಲ್ಲಾಸ್ ರೈ, ದೇವಸ್ಥಾನದ ಅರ್ಚಕ ಸಂತೋಷ್, ಜಯಂತ ಮೂಡುಶೆಡ್ಡೆ, ಗಣನಾಥ ಭಂಡಾರಿ ಮಟ್ಟಿ, ವಿನಯ ಕುಮಾರ್ ಮೇಗಿನಮನೆ, ರಾಜೇಶ್ ಕೊಂಚಾಡಿ, ಕೇಶವ ಪೂಜಾರಿ ಮಳಲಿ, ಮಲ್ಲಿಕಾ ಮತ್ತು ಆಡಳಿತ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ ಸ್ವಾಗತಿಸಿ, ವಂದಿಸಿರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಸತೀಶ್ ಶೆಟ್ಟಿ ಕಂದಾವರ ಕಾರ್ಯಕ್ರಮ ನಿರೂಪಿಸಿದರು.