ಚಿತ್ರದುರ್ಗ: ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದಿಲ್ಲೊಂದು ಮೈಲುಗಲ್ಲನ್ನು ಸಾಧಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

ಪುಷ್ಪಕ್‌ ಖ್ಯಾತಿಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (RLV LEX-03) ಪ್ರಯೋಗವನ್ನು ಇಸ್ರೊ ಇಂದು (ಭಾನುವಾರ) ಯಶಸ್ವಿಯಾಗಿ ನಡೆಸಿದೆ. ಅಲ್ಲದೇ ಇದು 3ನೇ ಮತ್ತು ಕೊನೆಯ ಪ್ರಾಯೋಗಿಕ ಉಡಾವಣೆಯೂ ಆಗಿದೆ.

ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿರುವ ಇಸ್ರೋ ಸಂಸ್ಥೆಯ ಏರೋನಟಕಲ್‌ ಟೆಸ್ಟ್‌ ರೇಂಜ್‌ (ATR) ಆವರಣದ ರನ್‌ವೇನಲ್ಲಿ ಬೆಳಗ್ಗೆ 7:10 ಗಂಟೆ ವೇಳೆ ಪ್ರಯೋಗ ನಡೆಸಿದ್ದು, ಲ್ಯಾಂಡಿಂಗ್‌ ಯಶಸ್ವಿಯಾಗಿರುವುದಾಗಿ ಇಸ್ರೋ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಬೆಳಗ್ಗೆ 7.10ರ ಸುಮಾರಿಗೆ ರಾಕೆಟ್‌ ಉಡಾವಣೆ ಮಾಡಿದ ಬಳಿಕ ಸುಮಾರು 4.5 ಕಿಲೋಮೀಟರ್‌ ಎತ್ತರದಲ್ಲಿ ಹಾರಾಟ ನಡೆಸಿದ ರಾಕೆಟ್‌, ಸುರಕ್ಷಿತವಾಗಿ ಲ್ಯಾಂಡ್‌ ಆಯಿತು. ಇದರೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್‌ ತಂತ್ರಜ್ಞಾನದಲ್ಲಿ ಇಸ್ರೋ ಮಹತ್ವದ ಮುನ್ನಡೆ ಕಾಯ್ದುಕೊಂಡಂತಾಗಿದೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ಮರುಬಳಕೆ ರಾಕೆಟ್‌ಗಳ ಉಡಾವಣೆಯಿಂದ ಹೆಚ್ಚಿನ ಹಣ ಉಳಿತಾಯವಾಗಲಿದೆ ಎಂಬುದು ಇಸ್ರೋ ಉದ್ದೇಶವಾಗಿದೆ.

ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಸಹಾಯದಿಂದ RLV LEX-03 ಉಡಾವಣಾ ವಾಹವನ್ನು ಮೇಲಕ್ಕೆ ಕೊಂಡೊಯ್ದು, 4.5 ಕಿಮೀ ಎತ್ತರದಿಂದ ಲ್ಯಾಂಡಿಗ್​ಗೆ ಬಿಟ್ಟು ಟೆಸ್ಟಿಂಗ್ ಮಾಡಲಾಯಿತು.

ಈ ಅಭೂತಪೂರ್ವ ಸಾಧನೆಗೆ ಕಾರಣವಾದ ಇಸ್ರೋ ತಂಡಕ್ಕೆ ಅಧ್ಯಕ್ಷ ಎಸ್. ಸೋಮನಾಥ್ ಅಭಿನಂದನೆ ಸಲ್ಲಿದ್ದಾರೆ.