ಕಲ್ಲಡ್ಕ: ಪೋಷಕರ ಒಡನಾಟ, ಕುಟುಂಬ ರೂಪದ ಪ್ರೀತಿ ಬಾಂಧವ್ಯ ಮಮತೆ ಇದ್ದರೆ ಶಾಲೆಗಳು ಯಾವ ರೀತಿ ಅಭಿವೃದ್ಧಿ ಹೊಂದುತ್ತವೆ ಎಂಬುದಕ್ಕೆ ಏಮಾಜೆ ಶಾಲೆ ಮಾದರಿಯಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ. ಜಿ. ಹೇಳಿದರು.
ಅವರು ಬಂಟ್ವಾಳ ತಾಲೂಕು ನೆಟ್ಲ ಮೂಡ್ನೂರು ಗ್ರಾಮದ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ನೂತನವಾಗಿ ಪ್ರಾರಂಭವಾದ ಪೂರ್ವ ಪ್ರಾಥಮಿಕ ( ಎಲ್ ಕೆ ಜಿ ಮತ್ತು ಯು ಕೆ ಜಿ )ತರಗತಿಯನ್ನು ಉದ್ಘಾಟಿಸಿ, ಶಾಲೆಯಲ್ಲಿ ಅಕ್ಷರ ದಾಸೋಹ ಸಂಬಂಧ ಪಟ್ಟ “ಅಕ್ಷಯ ಪಾತ್ರೆ” ಕಾರ್ಯಕ್ರಮವಾಗಿ ಕಳಸೆಗೆ ಅಕ್ಕಿ ತುಂಬಿಸಿ, ತನ್ನ ಸ್ವಂತ ಧನ ಸಮರ್ಪಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹಾಗೂ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ಎಲ್ಲಾ ಗ್ರಾಮೀಣ ಭಾಗದ ಶಾಲೆಗಳನ್ನು ಆದಷ್ಟು ಬೇಗ ಒಮ್ಮೆ ಸಂದರ್ಶಿಸಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ, ಶಾಲೆಗಳಿಗೆ ಇಲಾಖಾ ಮಟ್ಟದಲ್ಲಿ ದೊರೆಯುವ ಸೌಲಭ್ಯವನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ 2024-2025 ನೇ ಸಾಲಿನ ಶಾಲಾ ಮಂತ್ರಿಮಂಡಲಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಅಧಿಕಾರ ಹಸ್ತಾಂತರಿಸಿ ಪ್ರಮಾಣವಚನ ಬೋಧಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ದಾನಿಗಳು ಕೊಡುಗೆಯಾಗಿ ನೀಡಿದ ಶಾಲಾ ಎಲ್ಲ ಮಕ್ಕಳಿಗೆ ಬರೆಯುವ ಪುಸ್ತಕ, ಶಾಲಾ ಸಮವಸ್ತ್ರ, ಬೆಲ್ಟ್, ಟೈ, ಗುರುತಿನ ಕಾರ್ಡು ಮೊದಲಾದವುಗಳನ್ನು ವಿತರಿಸಿದರು. ಬೆಳಿಗ್ಗೆ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಶಾಲಾ ಆವರಣದಲ್ಲಿ ಗಿಡವನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕಾ, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತ ಡಿ ಪೂಜಾರಿ, ಸದಸ್ಯರಾದ ಧನಂಜಯ ಗೌಡ, ಶಾಲಾ ಗೌರವಾಧ್ಯಕ್ಷರಾದ ಜಯರಾಮ್ ರೈ, ನಿವೃತ್ತ ಪ್ರಾಂಶುಪಾಲರಾದ ಪ್ರೇಮಲತಾ ರೈ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುರಳೀಧರ ಶೆಟ್ಟಿ, ಮಕ್ಕಳ ಪೋಷಕರು,ವಿದ್ಯಾಭಿಮಾನಿಗಳು, ವಿದ್ಯಾರ್ಥಿಗಳು,ಶಿಕ್ಷಕರು, ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಡಾ ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯ ಚಂದ್ರ ವಂದಿಸಿ, ಗೌರವ ಶಿಕ್ಷಕಿ ಅಕ್ಷತಾ ಕೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ದೀಕ್ಷಾ ಸಹಕರಿಸಿದರು.