ತಾಲೂಕಿನಲ್ಲಿ ನೆರೆ ಹಾಗೂ ಮಳೆಯಿಂದ ಜೀವಕ್ಕೆ ಹಾನಿಯಾಗದಂತೆ ಅಧಿಕಾರಿಗಳು ಸದಾ ಜಾಗೃತರಾಗಿರುವಂತೆ ಮತ್ತು ತಂಡವಾಗಿ ಕಾರ್ಯನಿರ್ವಹಿಸಬೇಕು, ಸಾರ್ವಜನಿಕರಿಂದ ದೂರುಗಳು ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಅವರು ಮಳೆ ವಿಪತ್ತು ನಿರ್ವಹಣೆ ಬಗ್ಗೆ ತಾ.ಪಂ.ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಕರೆದ ತಾಲೂಕಿನ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಶಾಲೆಗೆ ತೆರಳುವ ವೇಳೆ ಮತ್ತು ಸಂಜೆ ಮನೆಗೆ ವಾಪಸು ಬರುವ ಸಮಯದಲ್ಲಿ ಬಸ್ ಗಳ ಕೊರತೆಯಿರುವ ಬಗ್ಗೆ ಮಕ್ಕಳಿಂದ ಮತ್ತು ಪೋಷಕರಿಂದ ದೂರುಗಳು ಬಂದಿದ್ದು, ಧರ್ಮಸ್ಥಳ ರೂಟ್ ಗಳಲ್ಲಿ ಶಾಲಾ ಮಕ್ಕಳು ಪುಟ್ ಪಾತ್ ನಲ್ಲಿ ಜೀವವನ್ನು ಕೈಯಲ್ಲಿಟ್ಟು ನೇತಾಡಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಕೆಲವು ಕಡೆಗಳಲ್ಲಿ ಬಸ್ ಗಳನ್ನು ನಿಲ್ಲಿಸುವುದಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಹಾಗಾಗಿ ಹೆಚ್ಚುವರಿ ಬಸ್ ಗಳನ್ನು ಓಡಾಟ ಮಾಡುವುದು ಮತ್ತು ಶಾಲಾ ಮಕ್ಕಳಿಗೆ ಶಾಲೆಗೆ ತೆರಳುವ ವೇಳೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಕೃಷಿಯನ್ನು ನಂಬಿ ಜೀವನ ಸಾಗಿಸುವ ಅನೇಕ ಮಂದಿ ಇದ್ದು, ಸರಕಾರದ ಅದೇಶ ಎಂದು ಅಧಿಕಾರಿಗಳು ರೈತರ ಮೇಲೆ ಸವಾರಿ ಮಾಡುವುದು ಸರಿಯಲ್ಲ, ಇಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಿ ಕಾನೂನಿನ ಅಡಿಯಲ್ಲಿ ರೈತರಿಗೆ ಕೃಷಿಯನ್ನು ಅಭಿವೃದ್ದಿ ಮಾಡಲು ಅವಕಾಶ ನೀಡಿ ಎಂದು ಅಧಿಕಾರಿಗಳು ಸೂಚನೆ ನೀಡಿದರು.
ಕಾನೂನು ಎಲ್ಲರಿಗೂ ಒಂದೇ ಸಮನಾಗಿದ್ದು, ಜನರಿಗೆ ತೊಂದರೆ ನೀಡುವ ರೀತಿಯಲ್ಲಿ ಅಥವಾ ಅವಘಡ ಸಂಭವಿಸುವ ಸಾಧ್ಯತೆ ಇರುವ ಮರಗಳನ್ನು ತೆರವು ಮಾಡುವಂತೆ ಸಹಾಯಕ ಅರಣ್ಯ ಅಧಿಕಾರಿ ಪ್ರಪುಲ್ ರೈ ಅವರಿಗೆ ಸೂಚನೆ ನೀಡಿದರು.
ಸಾಧ್ಯವಾದಷ್ಟು ಅಂಗನವಾಡಿಗಳನ್ನು ಪ್ರಾಥಮಿಕ ಶಾಲೆಯ ಜೊತೆಗೆ ಮಾಡುವಂತೆ ಸಲಹೆ ನೀಡಿದರು. ಈ ಹಿಂದೆ ಅನೇಕ ಬಾರಿ ವಿಚಾರವನ್ನು ತಿಳಿಸಿದ್ದೇನೆ. ಮಗುವಿನ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಸಾಧ್ಯವಾಗಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಅವಕಾಶ ಇದ್ದರೂ ಶಾಲೆಯ ಜೊತೆಯಲ್ಲಿ ಅಂಗನವಾಡಿಯನ್ನು ಸೇರಿಸಿಕೊಳ್ಳಲು ತಾಲೂಕಿನ ಬಿ.ಇ.ಒ.ಮಂಜುನಾಥ್ ಅವರು ಅವಕಾಶ ನೀಡುವುದಿಲ್ಲ ಎಂದು ಸಿ.ಡಿ.ಪಿ.ಒ. ಶಾಸಕರಲ್ಲಿ ದೂರು ನೀಡಿದಾಗ, ಅಂಗನವಾಡಿಯ ಮಕ್ಕಳಿಗೆ ಶಾಲೆಯಲ್ಲಿ ಅವಕಾಶ ನೀಡದಿದ್ದರೆ ಅವರ ಮನೆಯಲ್ಲಿ ಅಂಗನವಾಡಿಗಳನ್ನು ನಡೆಸಲಿ ಎಂದು ಗರಂ ಆದ ಶಾಸಕರು, ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಸಮಸ್ಯೆ ಪರಿಹಾರ ಮಾಡುವುದು ಬಿಟ್ಟು ಕಚೇರಿಯಲ್ಲಿ ಕುಳಿತು ಅದೇಶ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮಳೆಗಾಲದಲ್ಲಿ ವಿಷಜಂತು ಕಡಿತಕ್ಕೊಳಗಾದರೆ ಅಂತಹ ಸಂದರ್ಭದಲ್ಲಿ ಸೂಕ್ತವಾದ ಚಿಕಿತ್ಸೆಗಾಗಿ ಔಷಧವನ್ನು ದಾಸ್ತಾನು ಮಾಡಿಕೊಂಡಿರಬೇಕು, ಡೆಂಗ್ಯೂ ಸಹಿತ ಇನ್ನಿತರ ಮಾರಕ ರೋಗವನ್ನು ತಡೆಗಟ್ಟಲು ಹೆಚ್ಚಿನ ನಿಗಾವಹಿಸಿ, ತಾಲೂಕಿನ ಸ್ವಚ್ಚತಾ ಗಾಗಿ ಮುತುವರ್ಜಿವಹಿಸಿ ಎಂದು ಅರೋಗ್ಯ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಮಳೆ ಹಾನಿ ಅಥವಾ ಪಾಕೃತಿಕ ವಿಕೋಪದಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ವೇಳೆ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿಯೇ ಆಯ್ಕೆ ಮಾಡಬೇಕು. ಆಯ್ಕೆ ಮಾಡಿದ ಬಳಿಕ ಬಂದ ದೂರನ್ನು ಸ್ವೀಕರಿಸಿ ಮನೆ ಅಥವ ಇತರ ಫಲಾನುಭವಿಗಳಿಗೆ ಅನ್ಯಾಯವಾದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳ ಬಗ್ಗೆ ಹಣವಸೂಲಿ ಮಾಡುವ ಅಥವ ಬ್ಲ್ಯಾಕ್ ಮೇಲ್ ಮಾಡುವ ವ್ಯಕ್ತಿಗಳಿಗೆ ಶರಣಾಗದೆ, ಅಂತಹವರ ಮೇಲೆ ಪ್ರಕರಣ ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುತ್ತೂರು ಕ್ಷೇತ್ರಕ್ಕೆ ಬಂಟ್ವಾಳದ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇತ್ರಾವತಿ ನದಿಯಿಂದ ಬಹುಗ್ರಾಮ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಿದ್ದು, ಇದೀಗ ಬಾಳ್ತಿಲ ಗ್ರಾಮಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೆ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ ಮತ್ತು ಗ್ರಾಮಕ್ಕೆ ನೀರು ನೀಡದೆ ಪುತ್ತೂರಿಗೆ ನೀರು ಸರಬರಾಜು ಮಾಡುವುದಕ್ಕೆ ಗ್ರಾಮಸ್ಥರ ವಿರೋಧದ ಬಗ್ಗೆ ದೂರಿನ ಬಗ್ಗೆ ಶಾಸಕರು ಅಧಿಕಾರಿಗಳಲ್ಲಿ ಮಾಹಿತಿ ಪಡೆದರು.
ಕಾಮಗಾರಿಯ ಬಗ್ಗೆ ಗ್ರಾಮ ಪಂಚಾಯತ್ ಗಾಗಲಿ ಅಥವಾ ಇಲ್ಲಿನ ಗ್ರಾಮಸ್ಥರಿಗಾಗಲಿ ಯಾಕೆ ಮಾಹಿತಿ ನೀಡದೆ ಮುಂದುವರಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಅಲ್ಲಿನ ಗ್ರಾಮ ಪಂಚಾಯತ್ ಗೆ ಮೊದಲ ಅಧ್ಯತೆಯಲ್ಲಿ ನೀರು ನೀಡಿ ಇಲ್ಲದಿದ್ದರೆ ನೀರನ್ನು ಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಖಾರವಾಗಿ ತಿಳಿಸಿದರು.
ಪುರಸಭಾ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುವ ಬಗ್ಗೆ ಅನೇಕ ದೂರುಗಳು ಬಂದಿವೆ. ಕಸ ಎಸೆಯುವ ಕಡೆಗಳಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಿ, ಸಿ.ಸಿ.ಕ್ಯಾಮರಾಗಳನ್ನು ಹಾಕಿ, ಕಸ ಎಸೆಯುವವರ ಪೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ. ಮಾನಮರ್ಯಾದೆ ಇರುವ ವ್ಯಕ್ತಿಗಳು ಮತ್ತೆ ಕಸ ಎಸೆಯುವುದಕ್ಕೆ ಬರುವುದಿಲ್ಲ. ನಂತರವೂ ಮುಂದುವರಿದರೆ ಅಂತವರ ಮೇಲೆ ದಂಡ ವಿಧಿಸಿ ಎಂದು ಅವರು ಸೂಚಿಸಿದರು. ಗ್ರಾಮಪಂಚಾಯತ್ ಗಳಲ್ಲಿ ಕೂಡ ಸ್ವಚ್ಛತೆಗೆ ಆದ್ಯತೆ ನೀಡಿ ,ಕಸ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಿ, ತಾಜ್ಯ ಎಸೆಯುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ಅವರು ತಿಳಿಸಿದರು.
ಶಾಲಾ ಕಾಲೇಜು ಕ್ಯಾಂಪಸ್ ಹಾಗೂ ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಗಾಂಜಾ ಮಾರಾಟ ವಾಗುತ್ತಿರುವುದರ ಬಗ್ಗೆ ಸಾರ್ವಜನಿಕ ದೂರುಗಳಿವೆ, ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ನಿಗಾವಹಿಸಿ ಅಂತಹವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಿ ಎಂದು ಶಾಸಕರು ಸೂಚನೆ ನೀಡಿದರು.
ಈ ಸಂದರ್ಭ ವೇದಿಕೆಯಲ್ಲಿ ತಹಶಿಲ್ದಾರ್ ಅರ್ಚನಾ ಭಟ್, ತಾ.ಪಂ.ಇ.ಒ ಮಹೇಶ್ ಹೊಳ್ಳ, ಉಪಸ್ಥಿತರಿದ್ದರು.