ಕಲ್ಲಡ್ಕ ಜೂನ್ 13: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಉಪ ಕೇಂದ್ರ ವಿರಕಂಬ, ಗ್ರಾಮ ಪಂಚಾಯತ್ ವಿರಕಂಬ ಇದರ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆಯು ಸಮಿತಿಯ ಅಧ್ಯಕ್ಷರಾದ ಮೀನಾಕ್ಷಿ ಅವರ ಅಧ್ಯಕ್ಷತೆಯಲ್ಲಿ ವೀರಕಂಬ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.

ಈಗಾಗಲೇ ಮಳೆಗಾಲ ಆರಂಭವಾದ ಕಾರಣ ಗ್ರಾಮ ವ್ಯಾಪ್ತಿಯಲ್ಲಿ ಡೆಂಗ್ಯೂ ಮಲೇರಿಯಾ ಮುಂತಾದ ರೋಗಗಳನ್ನು ಬರದ ಹಾಗೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಸ್ವಚ್ಛತೆಯ ಕಡೆ ಗಮನಹರಿಸುವ ಬಗ್ಗೆ ಚರ್ಚಿಸಲಾಯಿತು. ಸಮುದಾಯ ಆರೋಗ್ಯ ಅಧಿಕಾರಿ ಹರ್ಷಿತ ಡೆಂಗ್ಯೂ ರೋಗದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಲಿಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ, ಮಜಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟ ಅಗ್ನೇಸ್ ಮಂಡೋನ್ಸಾ, ವೀರಕಂಬ ಗ್ರಾಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜ್ಯೋತಿ ಕೆ. ಎನ್. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೀರಕಂಬ ಗ್ರಾಮ ವ್ಯಕ್ತಿಯ ಆಶಾ ಕಾರ್ಯಕರ್ತೆಯರು, ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.

ಸಮಿತಿಯ ಕಾರ್ಯದರ್ಶಿ ಸ್ನೇಹಲತ ಶೆಟ್ಟಿ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಲೀಲಾವತಿ ವಂದಿಸಿದರು.