ಶ್ರೀನಗರ: ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ (Bus) ಕಮರಿಗೆ ಉರುಳಿದ ಪರಿಣಾಮ 10 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 33 ಮಂದಿ ಗಂಭೀರ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಿಯಾಸಿಯಲ್ಲಿ (Reasi) ನಡೆದಿದೆ.

ಬಸ್ ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – 28 ಪ್ರಯಾಣಿಕರಿಗೆ ಗಾಯ

ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಾತ್ರಿ 8:10ರ ವೇಳೆಗೆ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹತ್ತು ಸಾವುಗಳು ದೃಢಪಟ್ಟಿವೆ. 33 ಗಾಯಾಳುಗಳನ್ನು ರಿಯಾಸಿ, ತ್ರೇಯತ್ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಯಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ಬಸ್ ಕಮರಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಿಯಾಸಿ ಮೋಹಿತಾ ಶರ್ಮಾ ಹೇಳಿದ್ದಾರೆ. ಪ್ರಯಾಣಿಕರು ಯಾರೂ ಸ್ಥಳೀಯರಲ್ಲ ಮತ್ತು ಅವರ ಗುರುತನ್ನು ಇನ್ನೂ ದೃಢೀಕರಿಸಲಾಗಿಲ್ಲ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಭಯೋತ್ಪಾದಕರು ರಾಜೌರಿ, ಪೂಂಚ್ ಮತ್ತು ರಿಯಾಸಿಯ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಉಗ್ರರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ.