ಕಲ್ಲಡ್ಕ , ಜೂ.5: ಪರಿಸರವು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುವ ಹಾಗೂ ಆತನ ನಡವಳಿಕೆಯನ್ನು ಬಿಂಬಿಸುವ ಕೈಕನ್ನಡಿಯಂತೆ ವರ್ತಿಸುತ್ತದೆ ಎಲ್ಲಿಯವರೆಗೆ ಮನುಷ್ಯನು ಪರಿಸರಕ್ಕೆ ಸ್ನೇಹಿತನಾಗಿರುವನೋ ಅಲ್ಲಿ ವರೆಗೆ ಪರಿಸರವು ಆತನಿಗೆ ಸ್ನೇಹಿತನಂತೆ ವರ್ತಿಸಿರುತ್ತದೆ ಎಂದು ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಅಭಿಪ್ರಾಯ ಪಟ್ಟರು.

ಅವರು ಜೂ.5ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಸಹಯೋಗದಲ್ಲಿ ನಡೆದ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವನು ತನ್ನ ಜೀವನಶೈಲಿಯನ್ನು ಬದಲಾವಣೆ ಮಾಡಿದಾಗ ಪ್ರಕೃತಿಯು ಆತನಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಅಲ್ಲದೇ ಪರಿಸರಕ್ಕೆ ವಿರುದ್ಧವಾಗಿ ಕೆಲಸ ಮಾಡಿದಾಗ ಪರಿಸರವು ಆತನ ವಿರುದ್ಧವೇ ತಿರುಗಿ ಬೀಳುತ್ತದೆ ಆಗ ವಿಕೋಪಗಳು ಸಂಭವಿಸುತ್ತವೆ ಮತ್ತು ಮನುಷ್ಯನಿಗೆ ನಷ್ಟಗಳು ಉಂಟಾಗುತ್ತವೆ ಆದ್ದರಿಂದ ನಾವು ಪರಿಸರವನ್ನು ಪ್ರೀತಿಸಬೇಕು ಕಾಡು ಮಾನವ ಸಂಪನ್ಮೂಲವಾಗಿ ಉತ್ತಮವಾಗಿ ಬೆಳೆದಾಗ ಮಾತ್ರ ನಮ್ಮ ಭೂಮಿಯು ಸುಂದರವಾಗಲು ಸಾಧ್ಯ

ಪೂರ್ವಾಹ್ನ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯದ ಮಂಜುನಾಥನ್ ರವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆಯನ್ನು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು. ನಿತ್ಯ ಜೀವನದಲ್ಲಿ ಪರಿಸರ ವನ್ನು ಪ್ರೀತಿಸಿ ಉತ್ತಮ ಕೆಲಸವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ಪರಿಸರದ ವಿವಿಧ ಮಜಲುಗಳಲ್ಲಿ ಮನುಷ್ಯನ ಕೈವಾಡ ಇದ್ದೇ ಇರುತ್ತದೆ ಆತನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಿರಂತರವಾಗಿ ಬಳಸಿಕೊಂಡು ಅದಕ್ಕೆ ವಿರುದ್ಧವಾದ ಕಾರ್ಯಗಳನ್ನು ಮಾಡುತ್ತಾನೆ ಹಾಗೂ ಪರಿಸರದ ಕೋಪಕ್ಕೆ ಒಳಗಾಗಿ ಅದರ ವಿರುದ್ಧ ದ್ವೇಷ ಕಾರುತ್ತಾನೆ ಆದರೆ ಪರಿಸರವು ನಿಜವಾಗಿಯೂ ಎಲ್ಲಾ ಜೀವಿಗಳಿಗೂ ಆಶ್ರಯ ತಾಣ ಅದು ಯಾರಿಗೂ ಹಾನಿಯನ್ನು ಉಂಟುಮಾಡುವುದಿಲ್ಲ ನನ್ನ ಮನೆಯ ಸುತ್ತಮುತ್ತಲು ಸ್ವಚ್ಛವಾಗಿರುವಂತೆ ತನ್ನ ಪರಿಸರವನ್ನು ಕೂಡ ಸ್ವಚ್ಛತೆಯನ್ನು ಕಾಪಾಡಿ ಪ್ರೀತಿಸಿದಾಗ ಪರಿಸರವು ಆತನಿಗೆ ಒಳ್ಳೆಯ ಮಿತ್ರನಂತೆ ಇರುತ್ತದೆ ಇದಕ್ಕಾಗಿ ತನ್ನ ಪ್ರಾಥಮಿಕ ಜೀವನದಿಂದಲೇ ವಿದ್ಯಾರ್ಥಿಗಳು ಪರಿಸರಕ್ಕೆ ಹಿತವಾದ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಸ್ವಾರ್ಥಿಗಳಾಗಬೇಕು ಈ ಭೂಮಿಯಲ್ಲಿ ಮಾತ್ರ ಜೀವಿಗಳು ಇರಲು ಅನುಕೂಲವಾದ ಪರಿಸ್ಥಿತಿಯನ್ನು ಹೊಂದಿದೆ ಇದು ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಆವಾಸಸ್ಥಾನವಾಗಿದೆ ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ ಈ ಸುಂದರ ಪರಿಸರವನ್ನು ನಿರಂತರವಾಗಿ ನಾವು ಕಾಪಾಡಬೇಕಾಗುತ್ತದೆ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಕೇವಲವಾಗಿ ಕಾಣದೆ ಅದರ ಜೊತೆ ಹೊಂದಾಣಿಕೆಯಿಂದ ಜೀವನ ಸಾಗಿಸಿದಾಗ ಎಲ್ಲವೂ ಸುಂದರವಾಗಿ ಕಂಗೊಳಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಜಯವಾಣಿ ಪತ್ರಿಕೆ ವರದಿಗಾರರಾದ ಸಂದೀಪ್ ಸಾಲಿಯಾನ್ ಶಾಲೆಯಲ್ಲಿ ತರಗತಿ ಕೋಣೆಗಳಲ್ಲಿ ಹಾಗೂ ಮನೆಯಲ್ಲಿ ಕಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ವಿಧಾನ ಹಾಗೂ ಹಸಿ ಕಸ ಒಣ ಕಸ ಅಪಾಯಕಾರಿ ಕಸ ಮುಂತಾಗಿ ವಿಲೇವಾರಿ ಮಾಡುವ ವಿಧಾನಗಳು ನಿರುಪಯುಕ್ತ ಎಂದು ಬಿಸಾಡಿದ ಹಲವಾರು ವಸ್ತುಗಳಿಂದ ಕಸದಿಂದ ರಸ ತಯಾರಿಸುವ ವಿಧಾನವನ್ನು ತಿಳಿಸಿದರು.

ಪರಿಸರಕ್ಕೆ ಬೇಡವಾದ ವಸ್ತುಗಳನ್ನು ಮನೆಯಲ್ಲಿ ಯಾವ ರೀತಿ ಅಲಂಕಾರಿಕ ವಸ್ತುಗಳನ್ನಾಗಿ ಬಳಸಬಹುದು ಎಂದು ಪ್ರದರ್ಶಿಸಿದರು, ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಗಳನ್ನು ಬಾಟಲಿಗಳಲ್ಲಿ ತುಂಬಿಸಿ ಅವುಗಳನ್ನು ಕಲ್ಲುಗಳ ಮಾದರಿಯಲ್ಲಿ ಬಳಸುವ ವಿಧಾನವನ್ನು ಪ್ರಾತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶಾಲೆಗಳಲ್ಲಿ ಪರಿಸರವನ್ನು ಪ್ರೀತಿಸುವಂತಹ ಕಾರ್ಯಕ್ರಮಗಳನ್ನು ನಡೆಯಬೇಕು ವಿದ್ಯಾರ್ಥಿಗಳು ಸ್ವಚ್ಛತೆಯ ಬಗ್ಗೆ ಶಾಲೆಯ ಬಗ್ಗೆ ಹಾಗೂ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ನಿರುಪಯುಕ್ತ ವಸ್ತುಗಳ ಸಮರ್ಪಕ ವಿಲೇವಾರಿಯನ್ನು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್ ರವರು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದರು

ಈ ಸಂದರ್ಭದಲ್ಲಿ 2022 -23ನೇ ಸಾಲಿನಲ್ಲಿ ಶಾಲೆಯಲ್ಲಿ ನಡೆದ ಮನೆಗೊಂದು ಗಿಡ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಿಂದ ಶಾಲಾ ಪ್ರತಿ ಮಗುವಿಗೆ ನೀಡಿದ ಗಿಡಗಳನ್ನು ಇದುವರೆಗೂ ಬೆಳೆಸಿ ಕಾಪಾಡಿದ ಮಕ್ಕಳನ್ನು ಗುರುತಿಸಿ ಬಹುಮಾನ ನೀಡಿ ಅಭಿನಂದಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ದಿನಾಚರಣೆ ಕುರಿತು ತರಗತಿ ವಾರು ಪರಿಸರಕ್ಕೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ನಿತೇಶ್ ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಅಧ್ಯಕ್ಷರಾದ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ಯೋಜನೆಯ ಕಲ್ಲಡ್ಕ ವಲಯದ ಅಧ್ಯಕ್ಷರಾದ ತುಳಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು.

ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆಯ ಪ್ರಾರ್ಥನೆ ಮಾಡಿ, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಸುಗುಣ ಶೆಟ್ಟಿ ವಂದಿಸಿದರು. ಶಿಕ್ಷಕಿ ಸಂಗೀತ ಶರ್ಮ ಪಿ. ಜಿ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.