ಬಂಟ್ವಾಳ: ಜೂ.2: ಅದ್ವೈತ್ವ ತತ್ಪದ ಪ್ರತಿಪಾದಕ ಶಂಕರ ಭಗವತ್ಪಾದ ಕರು ಒಬ್ಬ ಮಾನವತಾವಾದಿ ಎಂದು ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಹೇಳಿದರು.
ಅವರು ಜೂ. 2ರಂದು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಂಗಳ ಮಂಟಪದಲ್ಲಿ ನಡೆದ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಶಂಕರ ಸೇವಾ ಪ್ರತಿಷ್ಠಾನ (ರಿ) ಕೋಟೆಕಾರು ಮಂಗಳೂರು, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ, ಶ್ರೀ ಶೃಂಗೇರಿ ಮಠ ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಘಟಕ ದ.ಕ., ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.
ಶಂಕರರ ವಿದ್ವತ್ತನ್ನು ಕಂಡಿದ್ದ ಕೇರಳದ ಅಂದಿನ ಅರಸನೆ ಅವರಿಗೆ ಬೆಂಗಾವಲಾಗಿ ನಿಂತಿದ್ದ. ವೈದಿಕ ಧರ್ಮದ ಅವನತಿಯ ಕಾಲಘಟ್ಟದಲ್ಲಿ ಶಂಕರರು ಅದ್ವೆತ್ ತತ್ವವನ್ನು ಪ್ರತಿಪಾದಿಸಿದರು. ಸನಾತನ ಭಾರತದ ವೇದಗಳನ್ನು ನಾಲ್ಕು ವಿಭಾಗವಾಗಿಸಿ ಜನರಿಗೆ ಮುಟ್ಟಿಸಿದರು. ಕೇರಳದಲ್ಲಿ ಹುಟ್ಟಿದ ಶಂಕರರು ಪ್ರತಿ ಮನೆಯಲ್ಲಿ ಸ್ಮರಿಸಬೇಕಾದಷ್ಟು ದೊಡ್ಡ ಸಾಧಕರು. ಶಂಕರ ಜಯಂತಿಯನ್ನು 1984ರಲ್ಲಿ ಆರಂಭಿಸಿದೆ. ಸಮಾಜದ ಸಂಘಟನೆಯ ಕೆಲಸವನ್ನು ಶಂಕರ ಪ್ರತಿಷ್ಠಾನ ಮಾಡುತ್ತದೆ ಎಂದರು.
ಬಂಟ್ವಾಳ ಕೂಟ ಮಹಾಜಗತ್ತು ಉಪಾಧ್ಯಕ್ಷ ಗಣಪತಿ ಸೋಮಯಾಜಿ ಮಾತನಾಡಿ, ಶಿವನಿಂದ ಅವತರಿಸಿದ ಶಂಕರರು, ಭಾರತವನ್ನು ಸಮಗ್ರ ಸಂಚರಿಸಿ ಜ್ಞಾನದ ತತ್ವವನ್ನು ಪಸರಿಸಿದ್ದಾಗಿ ತಿಳಿಸಿದರು.
ವಿಶ್ರಾಂತ ಪ್ರಾಂಶುಪಾಲ, ಉಪನ್ಯಾಸಕ ಡಾ. ಮಹಾಲಿಂಗ ಭಟ್ ಮಾತನಾಡಿ, ಶಂಕರರ ತತ್ವಗಳು ಜ್ಞಾನದ ಬೆಳಕು ನೀಡುವುದು. ನಾವು ಅವರನ್ನು ನಿತ್ಯ ಸ್ಮರಿಸಬೇಕಾಗಿದೆ. ಮೋಹ ಅತಿಯಾದರೆ ಬದುಕು ದುಸ್ತರ ಆಗುವುದು. ಎಲ್ಲವೂ ನಶ್ವರವೆಂದು ತಿಳಿದು ವಿವೇಕವಂತರಾಗಬೇಕು ಎಂದರು. ಇಂದು ಅನೇಕರಿಗೆ ಅಪ್ಪಅಮ್ಮನಿಗಿಂತ ಅವರು ಕೂಡಿಟ್ಟ ಹಣವೇ ಮುಖ್ಯ ಎಂಬಂತಾಗಿದೆ. ಹೆತ್ತವರನ್ನು ಮಕ್ಕಳು ಕೊನೆಗಾಲದಲ್ಲಿ ಸರಿಯಾಗಿ ನೋಡಿಕೊಳ್ಳಬೇಕು.
ಕೌಮರ್ಯದ 16 ನೇ ವಯಸ್ಸಿನಲ್ಲಿ ಶಂಕರರು ಆಚಾರ್ಯ ಪಟ್ಟವನ್ನು ಏರಿದರು. ತನ್ನ ತಾಯಿಯ ಕೊನೆಯ ದಿನಗಳಲ್ಲಿ ಅವರ ಜೊತೆಗಿದ್ದರು. ಇಂದಿನ ಸಮಾಜದ ಸಾತ್ವಿಕ ಆಚರಣೆಗೆ ಶಂಕರರು ಬಲಿಷ್ಟ ದಾರಿಯನ್ನು ಹಾಕಿದರು.
ಜೀವನ ಧರ್ಮವನ್ನು, ಮಾತೃ ಶ್ರೇಷ್ಟತೆಯನ್ನು ತಿಳಿಸಿದರು. ಆಚಾರ್ಯರ ತತ್ವಗಳು ಇಂತಹ ಕಾರ್ಯಕ್ರಮಗಳ ಮೂಲಕ ಇನ್ನಷ್ಟು ನಡೆಯಲಿ ಎಂದರು.
ತಾಲೂಕು ಪ್ರತಿಷ್ಠಾನ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವನೆ ನೀಡಿ, ಶಂಕರರ ತತ್ವ ಎಂದಿಗೂ ನಿತ್ಯ ನೂತನ, ಈ ವರ್ಷದ ಅಭಿಯಾನಕ್ಕೆ ಇಂದು ಸಮಾರೋಪ ಆಗುತ್ತಿದೆ ಎಂದರು. ಹಿಂದೂ ಧರ್ಮ ಜಗತ್ತಿನಲ್ಲಿ ನಾಶ ಆಗದು. ಧರ್ಮ ಶಾಶ್ವತವಾಗಿ ಇರಲು ಸನಾತನ ಧರ್ಮದ ಮರದ ಬುಡಕ್ಕೆ ನೀರು ಹಾಕಬೇಕು. ಆದರೆ ಪರಿಸ್ಥಿತಿ ಮರದ ತಲೆಗೆ ನೀರು ಹಾಕುವಂತಾಗಿದೆ ಎಂದರು. ಶಂಕರರು ಮಹಶಕ್ತಿಯಾಗಿದ್ದರು. ಅವರ ತತ್ವಗಳ ಒಂದಾಂಶ ಆದರೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸತ್ಸಂಗದಲ್ಲಿ ತೊಡಗಿದರೆ ಜ್ಞಾನ ಸ್ವಯಂ ಸ್ಪುರಿಸುತ್ತದೆ. ಉತ್ತಮ ಸಮಾಜವನ್ನು ಈ ಮೂಲಕ ನಿರ್ಮಿಸಲು ಎಲ್ಲರೂ ಸಹಕರಿಸಲು ಮನವಿ ಮಾಡುವುದಾಗಿ ಹೇಳಿದರು.
ಅಭಿಯಾನ ಸಂಘಟಕ, ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ಐತಾಳರು ವೇದಿಕೆಯಲ್ಲಿ ಶಂಕರರ ಅಷ್ಟೋತ್ತರ ಪಠಿಸಿದರು. ಅಭಿಯಾನ ಸಮಿತಿ ಗೌರವ ಅಧ್ಯಕ್ಷ ಕೆ. ಮೋಹನ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಚಾಲಕ ಎ . ಕೃಷ್ಣ ಶರ್ಮ ಬಿ.ಸಿ.ರೋಡ್ ಸ್ವಾಗತಿಸಿ, ಜಗದೀಶ ಹೊಳ್ಳ ಮೊಡಂಕಾಪು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
.