ವಾಷಿಂಗ್ಟನ್: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಎಲ್ಲಾ ಐವರು ವಿದ್ಯಾರ್ಥಿಗಳೂ 18 ವರ್ಷ ವಯಸ್ಸಿನವರು. ಆಲ್ಫರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ನಂತರ ವೇಗವಾಗಿ ಬಂದ ವಾಹನವು ಪಲ್ಟಿಯಾಗಿ ಬಿದ್ದಿದೆ. ಆರ್ಯನ್ ಜೋಶಿ ಮತ್ತು ಶ್ರೀಯಾ ಅವಸರಲಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನ್ವಿ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ರಿಥ್ವಾಕ್ ಸೋಮೆಪಲ್ಲಿ ಮತ್ತು ಮೊಹಮ್ಮದ್ ಲಿಯಾಕತ್ ಅವರಿಗೆ ಅಲ್ಫರೆಟ್ಟಾದ ನಾರ್ತ್ ಫುಲ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಯಾ ಅವಸರಲಾ ಯುಜಿಎ ಶಿಕಾರಿ ನೃತ್ಯ ತಂಡದ ಸದಸ್ಯರಾಗಿದ್ದರು. ಅನ್ವಿ ಶರ್ಮಾ ಯುಜಿಎ ಕಲಾಕಾರ ಮತ್ತು ಕ್ಯಾಪೆಲ್ಲಾ ತಂಡದ ಹಾಡುಗಾರ್ತಿಯಾಗಿದ್ದರು. ಇವರಿಬ್ಬರ ಸಾವಿಗೂ ತಂಡಗಳು ಸಂತಾಪ ಸೂಚಿಸಿವೆ.
ಕಳೆದ ತಿಂಗಳು ಅರಿಜೋನಾದ ಲೇಕ್ ಪ್ಲೆಸೆಂಟ್ ಬಳಿ ತೆಲಂಗಾಣದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಅಪಘಾತದಿಂದ ಮೃತಪಟ್ಟಿದ್ದರು. ಪಿಯೋರಿಯಾದಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 19 ವಯಸ್ಸಿನ ನಿವೇಶ್ ಮುಕ್ಕಾ ಮತ್ತು ಗೌತಮ್ ಕುಮಾರ್ ಪಾರ್ಸಿ ಸಾವನ್ನಪ್ಪಿದ್ದರು.