ರಾಯಚೂರು/ಮೈಸೂರು: ಭಾನುವಾರ ರಾತ್ರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕೆಲವೆಡೆ ರೈತರು ಸಂತಸಪಟ್ಟರೆ ಇನ್ನೂ ಕೆಲವೆಡೆ ಭಾರೀ ಮಳೆಯಿಂದ ಅನಾಹುತಗಳು ನಡೆದಿವೆ.

ರಾಯಚೂರು ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಭತ್ತದ ರಾಶಿಗಳು ನೀರುಪಾಲಾಗಿದೆ. ಮಾರಾಟಕ್ಕೆ ತಂದಿದ್ದ ಭತ್ತ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಸೋರುತ್ತಿರುವ ಎಪಿಎಂಸಿ ಪ್ರಾಂಗಣದ ಮೇಲ್ಛಾವಣಿ ಸೋರಿದ್ದರಿಂದ ರಾಶಿ ಹಾಕಿದ್ದ ಭತ್ತವೆಲ್ಲಾ ಒದ್ದೆಯಾಗಿದೆ. ಹೀಗಾಗಿ ರೈತರು ಹಾಗೂ ಹಮಾಲಿಗಳು ರಾತ್ರಿಯೆಲ್ಲಾ ಪರದಾಡಿದ್ದು, ಎಪಿಎಂಸಿ ಪ್ರಾಂಗಣದಿಂದ ನೀರು ಹೊರಹಾಕಿದ್ದಾರೆ. ಇನ್ನೂ ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ಥಗೊಂಡಿದೆ.

ಇತ್ತ ಭಾರೀ ಮಳೆಗೆ ಹುಣಸೂರು ಪಿರಿಯಾಪಟ್ಟಣ ರಸ್ತೆ ಗಂಟೆಗಟ್ಟಲೆ ಬಂದ್ ಆಗಿದೆ. ಭಾನುವಾರ ಸಂಜೆ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ 2075 ರ ಅತಿಕುಪ್ಪೆ ಅರಸು ಕಲ್ಲಳ್ಳಿ ಬಳಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ರಸ್ತೆಗೆ ಲೈಟ್ ಕಂಬ ಮುರಿದು ಬಿದ್ದ ಕಾರಣ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ವಾಹನಗಳು ಕಿಲೋ ಮೀಟರ್ ಗಳಷ್ಟು ಸಾಲು ಗಟ್ಟಿ ನಿಂತಿದ್ದವು. ಟ್ರಾಫಿಕ್ ಜಾಮ್ ನಿಂದ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗಿದೆ.