ಚನ್ನರಾಯಪಟ್ಟಣದಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶವನ್ನು ಸಿ.ಎಂ.ಸಿದ್ಧರಾಮಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಸ್ವಲ್ಪ ವಿಶ್ರಾಂತಿ ಕೊಟ್ಟು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ನನಗೆ ಬರಲಾಗಲಿಲ್ಲ. ನಾನು ಬಂದಿದ್ದಿದ್ರೆ ಚನ್ನರಾಯಪಟ್ಟಣದಲ್ಲಿ ಗೋಪಾಲಸ್ವಾಮಿ, ಹೊಳೆನರಸೀಪುರದಲ್ಲಿ ಶ್ರೇಯಸ್ ಪಟೇಲ್ ಕೂಡ ಗೆಲ್ತಿದ್ರು. ಗೋಪಾಲಸ್ವಾಮಿ ಮುಂದಿನ ಬಾರಿ ಗೆಲ್ತಾರೆ. ಶ್ರೇಯಸ್ ಪಟೇಲ್ ಈ ಬಾರಿ ಗೆಲ್ತಾರೆ ಎನ್ನುವ ವಿಶ್ವಾಸವಿದೆ.

ಮೋದಿಯವರನ್ನು ವಾಚಾಮಗೋಚರವಾಗಿ ಟೀಕಿಸುತ್ತಿದ್ದ ದೇವೇಗೌಡರು ಈಗ ಉಲ್ಟಾ ಹೊಡೆದಿದ್ದಾರೆ. ತಮಗೂ ಮೋದಿಯವರಿಗೂ ಜನ್ಮ ಜನ್ಮದ ಸಂಬಂಧ ಇದೆ ಎಂದು ಹೇಳುತ್ತಿದ್ದಾರೆ. ನಿಮ್ಮ ಸಂಬಂಧ ಅಷ್ಟು ಚೆನ್ನಾಗಿದ್ದರೆ ಕೊಬ್ಬರಿ ಬೆಳೆಗೆ ಏಕೆ ಬೆಂಬಲ ಬೆಲೆ ಕೊಡಿಸಲಿಲ್ಲ? ಚನ್ನರಾಯಪಟ್ಟಣದ ಅಭಿವೃದ್ಧಿಗೆ ಹಣ ಏಕೆ ಕೊಡಿಸಲಿಲ್ಲ?

ಅಂಬಾನಿ-ಅದಾನಿ ಸೇರಿ ಅತ್ಯಂತ ಶ್ರೀಮಂತರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರು ರೈತರ ಸಾಲ ಮಾತ್ರ ಮನ್ನಾ ಮಾಡಲಿಲ್ಲ. ನಾವು ಇಡಿ ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಗ್ಯಾರಂಟಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು ಎಂದರು.