ಇಂದು ಸಿ.ಎಂ.ಸಿದ್ಧರಾಮಯ್ಯ ಅವರು ಉಡುಪಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಾಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿ ಬೆಲೆ ಏರಿಕೆಯಿಂದ ಕಷ್ಟದಲ್ಲಿರುವ ಜನರಿಗೆ ಆರ್ಥಿಕ ಬಲ ನೀಡಲು ಗ್ಯಾರಂಟಿಗಳನ್ನು ನೀಡುವ ಮೂಲಕ ಬಡವರ ಪರ ಕೆಲಸ ಮಾಡುವುದು ನಮ್ಮ ಸರ್ಕಾರದ ಗುರಿ.

2023 ರ ಜೂನ್ 11 ಕ್ಕೆ ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲೆಯಲ್ಲಿ 87 ಲಕ್ಷ ಮಹಿಳೆಯರು 33 ಕೋಟಿ ರೂ.ಗಳ ವೆಚ್ಚದಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 3,11,652 ಜನ ಲಾಭ ಪಡೆಯುತ್ತಿದ್ದು, ಇದಕ್ಕಾಗಿ 114 ಕೋಟಿ ರೂ. ವ್ಯಯಿಸಲಾಗುತ್ತಿದೆ. ಅನ್ನಭಾಗ್ಯ 7,66,000 ಜನರಿಗೆ ಉಚಿತ ಅಕ್ಕಿ ನೀಡಲಾಗುತ್ತಿದೆ.

ರಾಜ್ಯದ ಬಡವರಿಗೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರ ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4 ರಿಂದ 5 ಸಾವಿರ ರೂ. ನಮ್ಮ ಸರ್ಕಾರ ನೀಡುತ್ತಿದೆ.

ಬಿಜೆಪಿ ಪಕ್ಷದವರು ಗ್ಯಾರಂಟಿಗಳ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಗ್ಯಾರಂಟಿಗಳು ಎಲ್ಲರಿಗೂ ತಲುಪಬೇಕೆಂಬ ಉದ್ದೇಶದಿಂದ ಅನುಷ್ಠಾನ ಸಮಿತಿಗಳನ್ನು ರಚಿಸಿದ್ದೇವೆ. ಗ್ಯಾರಂಟಿಗಳಿಂದಾಗಿ ಅಭಿವೃದ್ಧಿಗೆ ದುಡ್ಡು ಇರಿಸಲು ಸಾಧ್ಯವಿಲ್ಲ ಎಂಬ ಟೀಕೆ ಬಂದಿತು.

ಪ್ರಧಾನಿಯವರು ಗ್ಯಾರಂಟಿಗಳಿಂದ ರಾಜ್ಯದಲ್ಲಿ ಆರ್ಥಿಕ ದಿವಾಳಿಯಾಗುತ್ತದೆ ಎಂದು ನುಡಿದಿದ್ದರು. ಆದರೆ ಈ ವರ್ಷ ₹ 36 ಸಾವಿರ ಕೋಟಿ ಹಾಗೂ ಮುಂದಿ ವರ್ಷ 52,009 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ನಿಗದಿಪಡಿಸಿದ್ದರೂ, ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿಗೆ 1.20 ಲಕ್ಷ ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಇಡಲಾಗಿದೆ. ವಿಪಕ್ಷಗಳು ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿವೆ.

ರಾಜ್ಯದಿಂದ 4.30 ಲಕ್ಷ ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ನೀಡಿದರೆ, ರಾಜ್ಯಕ್ಕೆ ಮರಳಿ ಬರುವುದು ಕೇವಲ ₹ 50,257 ಕೋಟಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗಿದ್ದು, ಇಲ್ಲಿನ ಸಂಸದೆ ಶೋಭಾ ಕರಂದ್ಲಾಜೆಯವರು ಈ ಬಗ್ಗೆ ಎಂದೂ ಕೇಂದ್ರವನ್ನು ಪ್ರಶ್ನಿಸಿಯೇ ಇಲ್ಲ. ಇಂತಹ ಸಂಸದರಿಗೆ ಬೆಂಬಲಿಸುತ್ತೀರಾ?

ಅಚ್ಛೇ ದಿನ್ ಆಯೆಂಗೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಆದರೆ ನಮ್ಮ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿದೆ. ನಾವು ಶೇ .98 ರಷ್ಟು ಭರವಸೆಗಳನ್ನು ಈಡೇರಿಸಿದ್ದರೆ, ಬಿಜೆಪಿಯವರು ಕೇವಲ ಶೇ.10 ರಷ್ಟು ಈಡೇರಿಸಿದ್ದಾರೆ.

ನರೇಂದ್ರ ಮೋದಿ ಅವರು ದೇಶದ ಎಲ್ಲ ಜನರ ಖಾತೆಗೆ ಹಣ ಹಾಕುವುದಾಗಿ ಹಾಗೂ ಉದ್ಯೋಗ ನೀಡುವುದಾಗಿ ಸುಳ್ಳು ಹೇಳಿದ್ದಾರೆ. ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟಿಸಿದರೆ, ಅಂದು ರಾಜ್ಯದಲ್ಲಿ ನಾನು ಆಂಜನೇಯ ದೇಗುಲವನ್ನು ಉದ್ಘಾಟಿಸಿದೆ. ಇಲ್ಲಿನ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ ₹ 100 ಕೋಟಿ ಅನುದಾನವನ್ನು ಕೊಟ್ಟಿರುವ ನಾನು ಹಿಂದೂ ವಿರೋಧಿ ಹೇಗಾಗುತ್ತೇನೆ?

ಸಂಸದ ಅನಂತ್ ಕುಮಾರ್ ಹೆಗಡೆಯವರು ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವುದಾಗಿ ತಿಳಿಸಿದ್ದರು. ಸಂವಿಧಾನ ಬದಲಾವಣೆ ಬಿಜೆಪಿಯ ಹುನ್ನಾರ. ಇದಕ್ಕೆ ಜನರು ಬಲಿಯಾಗಬಾರದು.
ಬಸವಣ್ಣನವರ ತತ್ವಗಳನ್ನಾಧರಿಸಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ.

ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಾವು ಘೋಷಿಸಿದ್ದೇವೆ. ಮೀನುಗಾರಿಕೆ ಇಲಾಖೆಗೆ 3 ಸಾವಿರ ಕೋಟಿ ರೂ. ಬಜೆಟ್ ನಲ್ಲಿ ಇಡಲಾಗಿದೆ. ಮೀನುಗಾರರಿಗೆ 10 ಸಾವಿರ ಮನೆಗಳನ್ನು ನೀಡಲಾಗುತ್ತಿದೆ. ಕರಾವಳಿ ಪ್ರದೇಶದ ಅಭಿವೃದ್ಧಿಗೊಳಿಸಲಾಗುವುದು. ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವ ಕಾಂಗ್ರೆಸ್ ಪಕ್ಷದ ಜೊತೆ ಕರಾವಳಿಯ ಜನ ನಿಲ್ಲಬೇಕು ಎಂದರು.