ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಸರ್.ಸಿ.ರಾಮನ್‌ರವರ ‘ರಾಮನ್ ಪರಿಣಾಮ’ ಆವಿಷ್ಕಾರದ ಸ್ಮರಣಾರ್ಥವಾಗಿ ಆಚರಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಫೆ.29 ರಂದು ಆಚರಿಸಲಾಯಿತು.
ಮುಖ್ಯಅತಿಥಿಯಾಗಿ ಆಗಮಿಸಿದ, ಪದ್ಮಶ್ರೀ ಪುರಸ್ಕೃತ ವಿವಿಧ ಭತ್ತ ತಳಿ ಸಂರಕ್ಷಕರಾದ, ಸತ್ಯನಾರಾಯಣ ಬೆಳೇರಿ ಕಾಸರಗೋಡು ಮಾತನಾಡುತ್ತಾ, “ಶಾಲೆಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವೆ, ‘ವಿದ್ಯಾದೇಗುಲವೆಂದರೆ ಶ್ರೀರಾಮ ಶಾಲೆ. ಎಲ್ಲಾ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲಿದೆ.
ಇಲ್ಲಿನ ವಿದ್ಯಾರ್ಥಿಗಳು ಜೀವನದಲ್ಲಿ ಎಂದೂ ಸೋಲನ್ನು ಕಾಣಲು ಸಾಧ್ಯವಿಲ್ಲ. ನಾನು ಮಾಡಿರುವ ಈ ಕೆಲಸ, ಉಳಿಸಿ, ಬೆಳೆಸುವ ಭರವಸೆ ನಿಮ್ಮ ಮೂಲಕಇಲ್ಲಿ ಮೂಡಿದೆ. ರೇಡಿಯೋ, ಪತ್ರಿಕೆ ಮಾಧ್ಯಮಗಳು ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಕೇವಲ ಓದುವಿಕೆ, ಕೇಳುವಿಕೆಯಿಂದ ಪೂರಕವಾದ ಮಾಹಿತಿಯನ್ನು ಕಲೆ ಹಾಕಿ ಈ ಭತ್ತದ ತಳಿ ಸಂರಕ್ಷಣೆಯನ್ನು ಮಾಡಿದ್ದೇನೆ.
ಅದೇ ರೀತಿ ಪಠ್ಯದ ಹೊರತಾಗಿ ನಿಮಗೆ ಆಸಕ್ತಿ ದಾಯವಾದ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ನಿರಂತರವಾಗಿ ತೊಡಗಿಸಿಕೊಳ್ಳಿ. ಇಂದು ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿಲ್ಲ. ಇಂದಿನ ವ್ಯವಸ್ಥೆಯಿಂದಾಗಿ ಕೃಷಿಯಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಆದರೆ ಈ ಸಂಸ್ಥೆಯಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಸಾಧಿಸುವುದು ಕಷ್ಟವಿಲ್ಲ. ಆ ರೀತಿಯ ವಾತಾವರಣವನ್ನು ಈ ಸಂಸ್ಥೆ ಕಲ್ಪಿಸಿದೆ. ಇದಕ್ಕೆ ಮುಖ್ಯವಾಗಿ ಬೇಕಾದುದು ಸರ್ಕಾರ ಗಮನಿಸುವಿಕೆ.
ಈ ಕೃಷಿಯನ್ನು ಪಠ್ಯದ ಭಾಗವಾಗಿತರಬೇಕು. ಅದರಲ್ಲಿ ಸಿಲಬಸ್ ತರುವುದು, ಅದಕ್ಕಾಗಿ ಅಂಕ ನೀಡುವ ವ್ಯವಸ್ಥೆತಂದರೆ ಮಕ್ಕಳು ಸಹಜವಾಗಿ ಕೃಷಿಯತ್ತ ಒಲವು ತೋರಿಸುವ ಸಾಧ್ಯತೆ ಇದೆ. ಶ್ರೀರಾಮ ವಿದ್ಯಾಕೇಂದ್ರದಂತಹ ಶಿಕ್ಷಣ ಸಂಸ್ಥೆಗಳು ತನ್ನಿಂತಾನೆ ಅದನ್ನೆಲ್ಲ ಮಾಡುತ್ತದೆ ಎನ್ನುವುದಕ್ಕೆ ಸಂಶಯವಿಲ್ಲ. ಆದರೆ ಕರ್ನಾಟಕದ ಎಲ್ಲಾ ಶಾಲೆಯ ಮಕ್ಕಳಿಗೂ ಇಂತಹ ವ್ಯವಸ್ಥೆ ದೊರೆಯುವಲ್ಲಿ ಸರಕಾರ ಗಮನಹರಿಸಬೇಕು.
ಉನ್ನತ ಶಿಕ್ಷಣ ಮಾಡಿ ಕೃಷಿಗೆ ಬಂದರೆ ಇನ್ನಷ್ಟೂ ಸಾಧನೆ ಮಾಡಲು ಅವಕಾಶವಿದೆ. ಕೃಷಿಯನ್ನು ಬಿಟ್ಟು ಯಾರಿಗೂ ಜೀವನ ನಡೆಸಲು ಸಾಧ್ಯವಿಲ್ಲ. ಕೃಷಿ ಒಂದುಅನ್ನದ ಭಾಗ.ಅದನ್ನು ಬೆಳೆದೇ ತಿನ್ನಬೇಕೆ ಹೊರತು ಹಾಗೆ ತಿನ್ನಲು ಸಾಧ್ಯವಿಲ್ಲ.”ಎಂದು ತಮ್ಮ ಕೃಷಿಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಅಭ್ಯಾಗತರು ವಿದ್ಯಾಕೇಂದ್ರದ ಚಟುವಟಿಕೆಯನ್ನು ವೀಕ್ಷಿಸಿ, ಭಾರತ ಮಾತೆಗೆ ದೀಪಪ್ರಜ್ವಲನೆ ಮಾಡಿ, ನಂತರ ಸರ್.ಸಿ.ರಾಮನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದ ನಿವೃತ್ತ ತಾಂತ್ರಿಕ ಸಹಾಯಕ ದಿವಾಕರ ಪಡೀಲ್ – ಶ್ಯಾಮಲ ದಿವಾಕರ್ ದಂಪತಿಗಳು ಅಗ್ನಿ ಹೋತ್ರಕ್ಕೆ ಘೃತಾಹುತಿ ನೀಡಿದರು.
ನಂತರ ಕೇಂದ್ರ ಇಂಧನ ಸಚಿವಾಲಯದ ಯಂಗ್‌ಚೇಂಜ್ ಮೇಕರ್ ಪ್ರಶಸ್ತಿ, ಡೆಕ್ಕನ್ ಹೆರಾಲ್ಡ್ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತ, ಸರ್ವಜ್ಞ ಎಜುಕೆಶನ್ ಪ್ರೈ..ಲಿ. ಸಂಸ್ಥಾಪಕರಾದ ಶ್ರೀನಿಧಿ ಆರ್.ಎಸ್. ಕೊಳಕೀರು, ಭತ್ತದ ಪೈರನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಂಘದ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ಸಂವಾದದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನು ಕೇಳಿದರು.ಶಾಲಾ ಕೃಷಿ ಮಂತ್ರಿಯಾದ ಸಂಜಯ್ ಮಾತನಾಡಿ, “ಸತ್ಯನಾರಾಯಣ ಬೆಳೇರಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈಗಾಗಲೇ ನನ್ನ ಬಿಡುವಿನ ಅವಧಿಯಲ್ಲಿ ಮನೆಯ ಹೈನುಗಾರಿಕೆಯಲ್ಲಿ ಕೈಜೋಡಿಸುತ್ತಿದ್ದು, ಇವರ ಕಾರ್ಯದಿಂದಾಗಿ ಮುಂದಿನ ದಿನಗಳಲ್ಲಿ ಮನೆಯ ಕೃಷಿ ಭೂಮಿಯಲ್ಲಿ ನನಗೂ ಭತ್ತ ಬೆಳೆಯುವ ಆಸಕ್ತಿ ಮೂಡಿದೆ.’ಎಂದು ತನ್ನ ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ತಿಲಕವಿಟ್ಟರು, ಶಾಲಾ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
7ನೇ ತರಗತಿಯ ಧಾತ್ರಿ ಪ್ರೇರಣಾಗೀತೆ ಹಾಡಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಅಧ್ಯಾಪಕರಾದ ವಿದ್ಯಾ ಬಹುಮಾನ ವಾಚಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಾಪಕರ ಮಾರ್ಗದರ್ಶನದಲ್ಲಿ ವಿಜ್ಞಾನ ಸಂಘದ ವಿದ್ಯಾರ್ಥಿಗಳಿಂದ ತಯಾರಾದ ‘ಚಂದ್ರಯಾನ 3’ ರ ಮಾದರಿಯ ಉಡಾವಣೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ
ಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಸ್ವಿಚ್ ಆನ್ ಮಾಡುವ ಮೂಲಕ ವಿಜ್ಞಾನ ಮಾದರಿ ಪ್ರದರ್ಶಿನಿಗೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ-ಗಣಿತ ಮಾದರಿಯನ್ನು ಪ್ರದರ್ಶಿಸಿದರು. ನಂತರ ಅತಿಥಿಗಣ್ಯರು ವೀಕ್ಷಿಸಿ ವಿವರಣೆಯನ್ನು ಪಡೆದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರಇಂಧನ ಸಚಿವಾಲಯ ದಯಂಗ್‌ಚೇಂಜ್ ಮೇಕರ್ ಪ್ರಶಸ್ತಿ, ಡೆಕ್ಕನ್ ಹೆರಾಲ್ಡ್ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತ, ಸರ್ವಜ್ಞಎಜುಕೆಶನ್ ಪ್ರೈ.ಲಿ. ಸಂಸ್ಥಾಪಕ ಶ್ರೀನಿಧಿ ಆರ್.ಎಸ್. ಕೊಳಕೀರು , ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್‌ಕಲ್ಲಡ್ಕ, ಕಾರವಾರದ ಕೈಗಾ ಅಣುವಿದ್ಯುತ್ ಸ್ಥಾವರದ ನಿವೃತ್ತ ತಾಂತ್ರಿಕ ಸಹಾಯಕ ದಿವಾಕರ ಪಡೀಲ್ – ಶ್ಯಾಮಲ ದಿವಾಕರ್ ದಂಪತಿಗಳು, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‌ಎನ್, ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾ ಆರ್. ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಸುಶ್ಮಿತಾ ಭಟ್ ನಿರೂಪಿಸಿ, ವೈಷ್ಣವಿ ಕಡ್ಯ ಸ್ವಾಗತಿಸಿ, ಚಿರಸ್ವಿ ವಂದಿಸಿದರು.