ಮದುವೆಗೆ ಮುಂಚಿತವಾಗಿ ವಧು ಮತ್ತು ವರರು ಕೈ ಮತ್ತು ಕಾಲಿಗೆ ಮೆಹಂದಿಯನ್ನು ಹಚ್ಚುವುದು ಭಾರತೀಯ ಸಂಪ್ರದಾಯವಾಗಿದೆ. ಇದರಿಂದ ವಧು ವರರ ಸೌದರ್ಯ ವೃದ್ಧಿಸುವುದು. ಮೆಹಂದಿ ತಂಪುಕಾರಕ ಗುಣ ಹೊಂದಿದೆ. ಮೆಹೆಂದಿಯು ಔಷಧೀಯ ಗುಣವುಳ್ಳ ಗಿಡವಾಗಿದೆ.
ಮೆಹಂದಿ ಅಥವಾ ಹೆನ್ನಾ ಎಂದೆ ಪ್ರಸಿದ್ಧಿಯನ್ನು ಪಡೆದಿರುವ ಈ ಗಿಡ ಮೂಲಿಕೆಯು ಆಯುರ್ವೇದದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುತ್ತದೆ. ಇದನ್ನು ಕೈ ಮತ್ತು ಕಾಲುಗಳ ಮೇಲೆ ಚಿತ್ತಾರ ಬರೆದುಕೊಳ್ಳಲು ಹೆಂಗಳೆಯರು ಹೆಚ್ಚಾಗಿ ಬಳಸುವುದರಿಂದಾಗಿ ಇದರ ಬಗ್ಗೆ ಎಲ್ಲರಿಗು ತಿಳಿದಿರುತ್ತದೆ. ಮಹಿಳೆಯರಿಗೆ ಮಾಡುವ ” ಸಪ್ತ ಶೃಂಗಾರ”ಗಳಲ್ಲಿ ಮೆಹಂದಿಯೂ ಒಂದು.
ಹೆಣ್ಣು ಮಕ್ಕಳು ಇದರ ಎಲೆಗಳನ್ನು ಅರೆದು ಕೈ ಕಾಲುಗಳಿಗೆ ಚಿತ್ರಾಕಾರವಾಗಿ ಹಚ್ಚುವರು. ತೊಳೆದ ಮೇಲೆ ಕೆಂಪು ರಂಗೇರಿ ಹೆಚ್ಚು ಸೌಂದರ್ಯವನ್ನು ಕೊಡುವುದು.
ಮೆಹಂದಿಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಒಂದು ಅಂಶವಿದ್ದು, ಇದನ್ನು ಎಲ್ಲಿ ಲೇಪಿಸುತ್ತೇವೆಯೋ ಅಲ್ಲಿ ಕೆಂಪು ಅಥವಾ ಕಂದು ಬಣ್ಣದ ಮೂಡುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಪ್ರಸಾದನ ಸಾಮಾಗ್ರಿಗಳಲ್ಲಿ ಬಳಸುತ್ತಾರೆ. ಹೆಚ್ಚಾಗಿ ಇದನ್ನು ಕೈಗಳಿಗೆ ಅಥವಾ ಚರ್ಮದ ಮೇಲೆ ವಿನ್ಯಾಸಗಳನ್ನು ರೂಪಿಸಲು ಹಾಗು ಕೂದಲಿಗೆ ಬಣ್ಣವನ್ನು ತರಲು ಬಳಸುತ್ತಾರೆ. ಇದರ ಜೊತೆಗೆ ಮೆಹಂದಿಯಲ್ಲಿ ಹಲವಾರು ಆರೋಗ್ಯಯುತ ಪ್ರಯೋಜನಗಳು ಇವೆಯೆಂದು ತಿಳಿದು ಬಂದಿದೆ.
ಮದರಂಗಿ ಬಳಕೆ
* ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು.
* ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಬಳಸಿದ್ದಾರೆ.
*. ಮೆಹಂದಿ ತಂಪು ಕಾರಕವಾಗಿದ್ದು ಮೊಡವೆ ನಿರೋಧಕ ಮೂಲಿಕೆಯಾಗಿದೆ. ಮೊಡವೆಗಳ ಕಾರಕಗಳನ್ನು ನಾಶ ಮಾಡಿ ಮೊಡವೆಗಳುಂಟಾಗದಂತೆ ತಡೆಯುತ್ತದೆ. ಮೆಹಂದಿಯನ್ನು ಹಚ್ಚಿಕೊಂಡರೆ ದೇಹದಲ್ಲಿರುವ ಉಷ್ಣವು ಇಳಿದು ಹೋಗುತ್ತದೆ. ಮೆಹಂದಿಯನ್ನು ಕಾಲಿಗೆ ಹಚ್ಚಿಕೊಂಡರೆ ಅದು ರಾತ್ರೋ ರಾತ್ರಿ ದೇಹಕ್ಕೆ ಅಗತ್ಯವಾದ ತಂಪನ್ನು ನೀಡುತ್ತದೆ.
ಮೆಹಂದಿಯಿಂದ ಕೂದಲಿನ ಆರೈಕೆ
* ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ
ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು ಚಿಟಿಕೆ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು.
ಮೆಹಂದಿ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಕೂದಲಿಗೆ ಹಚ್ಚುತ್ತಾರೆ. ಇದು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮೆಹಂದಿಯ ಪೇಸ್ಟನ್ನು ವಾರಕ್ಕೊಮ್ಮೆಯಾದರು ಕೂದಲಿಗೆ ಲೇಪಿಸುವುದರಿಂದ ಡ್ಯಾಂಡ್ರಫನ್ನು ನಿವಾರಿಸಬಹುದು, ಜೊತೆಗೆ ಕೂದಲಿಗೆ ಹೊಳಪು ಬರುತ್ತದೆ ಮತ್ತು ಕೂದಲಿನ ಆಯಸ್ಸು ಹೆಚ್ಚುತ್ತದೆ. ಇದರ ಜೊತೆಗೆ ಬಿಳಿಕೂದಲನ್ನು ಕಂದು ಕೂದಲಾಗಿ ಪರಿವರ್ತಿಸಲು ಮೆಹಂದಿ ಉಪಯೋಗಕ್ಕೆ ಬರುತ್ತದೆ. ಈಗಾಗಿ ಕೂದಲಿನ ಆರೋಗ್ಯದ ವಿಷಯದಲ್ಲಿ ಮೆಹಂದಿಗೆ ಪ್ರಮುಖ ಸ್ಥಾನವಿದೆ. ಇದಕ್ಕಾಗಿ ನಿಮ್ಮ ಬಳಿ ಯಾವಾಗಲು ಮೆಹಂದಿಯ ಪುಡಿ ಇರಲಿ ಹಾಗು ಅದರ ಹೇರ್ ಪ್ಯಾಕನ್ನು ನಿರಂತರವಾಗಿ ಬಳಸಿ.
ಬಿಳಿ ಕೂದಲು ಕಪ್ಪಾಗಲು (ಬಾಲನೆರೆ)
ಬ್ಲಾಕ್ ಟೀ ಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆರಿದ ನಂತರ ರುಬ್ಬಿದ ಮೆಹಂದಿ ಆಥವಾ ಪುಡಿ ಮೆಹಂದಿಗೆ ಹಾಕಿ ಕಲಸ ಬೇಕು, ಇದೇ ಸಂದರ್ಭದಲ್ಲಿ ನೆಲ್ಲಿಕಾಯಿ ಪುಡಿಯನ್ನು ಹಾಕಿ ಕಲಸ ಬೇಕು. ಈ ಮಿಶ್ರಣವನ್ನು ರಾತ್ರಿ ಇಡೀ ತೆಗೆದಿಟ್ಟು ಮರುದಿನ ಹಚ್ಚಬೇಕು. ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು. ಬಿಳಿ ಕೂದಲು ಕಂದು ಬಣ್ಣಕ್ಕೆ ತಿರುಗುವುದು
ಸುಟ್ಟ ಗಾಯಗಳಿಗೆ ರಾಮ ಬಾಣ
* ಮೆಹಂದಿಯು ಸುಟ್ಟಗಾಯಗಳಿಗೆ ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಏಕೆಂದರೆ ಈ ಮೊದಲೇ ತಿಳಿಸಿದಂತೆ ಮೆಹಂದಿಯು ಅತ್ಯುತ್ತಮವಾದ ತಂಪುಕಾರಕ ಗುಣಗಳನ್ನು ಒಳಗೊಂಡಿದೆ. ಆದ್ದರಿಂದ ಮೆಹಂದಿ ಎಲೆಗಳನ್ನು ಸುಟ್ಟಗಾಯಗಳ ಮೇಲೆ ಉಜ್ಜಿದರೆ ನೋವು ತಕ್ಷಣ ಉಪಶಮನಗೊಳ್ಳುತ್ತದೆ.
ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ
* ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು.
ಹೀಗೆ ಮೆಹಂದಿಯು ಅಂಟಿ ಬ್ಯಾಕ್ಟೀರಿಯಾ ಅಥವಾ ಆಂಟಿ – ಫಂಗಲ್ ಪೇಸ್ಟ್ ಆಗಿ ಉಪಯೋಗಕ್ಕೆ ಬರುತ್ತದೆ. ಇದನ್ನು ಕೂದಲ ಬೆಳವಣಿಗೆಗು ಸಹ ಬಳಸುತ್ತಾರೆ. ಜೊತೆಗೆ ಇದು ಉತ್ತಮವಾದ ಪರಿಮಳವನ್ನು ಸಹ ಹೊಂದಿದೆ. ಮೆಹಂದಿಯ ತೊಗಟೆಯು ಸಹ ಉತ್ತಮ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಇವೆಲ್ಲದರ ಜೊತೆಗೆ ಇದು ಧಾರ್ಮಿಕವಾಗಿ ಸಹ ಮಹತ್ವದ ಸ್ಥಾನಮಾನವನ್ನು ಹೊಂದಿದೆ.
Trackbacks/Pingbacks