ಫೆಬ್ರವರಿಯ ಆರಂಭದಿಂದಲೇ ನೇತ್ರಾವತಿ ಉಕ್ಕಿ ಹರಿಯುತ್ತಿದ್ದು, ಈಗಲೂ ಒಂದು ಗೇಟಿನಿಂದ ಹೆಚ್ಚುವರಿ ನೀರನ್ನು ಸಮುದ್ರಕ್ಕೆ ಬಿಡುತ್ತಿದ್ದು, ಈಗ ತುಂಬೆ ವೆಂಟೆಡ್ ಡ್ಯಾಂನಲ್ಲಿ 6.5 ಮೀಟರ್ ನೀರು ಸಂಗ್ರಹಿಸುತ್ತಿದ್ದು ಮಂಗಳೂರಿನ ಜನತೆಗೆ ಮೇ ತಿಂಗಳವರೆಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಹಾನಗರ ಪಾಲಿಕೆಯ ಮೇಯರ್ ಹೇಳಿದರು.

ಅವರು ಫೆ.5 ರಂದು ತುಂಬೆ ವೆಂಟೆಡ್ ಡ್ಯಾಂ ಬಳಿ ಗಂಗಾದೇವಿಗೆ ಪೂಜೆ ಸಲ್ಲಿಸಿ ನಂತರ ಡ್ಯಾಮ್‌ನ್ನು ವೀಕ್ಷಿಸಿ ಬಾಗಿನ ನೀಡಿದ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ಮಂಗಳೂರಿಗೆ ಸರಬರಾಜಾಗುವ ಮುಖ್ಯ ನೀರಿನ ಪೈಪ್‌ನಿಂದ ತುಂಬೆಯಿಂದ ಕಣ್ಣೂರು ತನಕ ಅನಧಿಕೃತ ಸಂಪರ್ಕ ಹೊಂದಿರುವ ಎಲ್ಲ ನೀರಿನ ಸಂಪರ್ಕಗಳನ್ನು ನಿರ್ದಾಕ್ಷಿಣ್ಯವಾಗಿ ಸಂಪರ್ಕ ತೆಗೆಯಲಾಗುವುದು. ಪಂಚಾಯತ್‌ಗಳಿಗೆ ನೀರು ಸರಬರಾಜು ಮಾಡಲು ಹೊಸ ಪ್ಲಾಂಟ್ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಪ್ರತೀ ಪಂಚಾಯತ್‌ಗೆ ಹತ್ತು ಎಂಎಲ್‌ಡಿ ನೀರನ್ನು ಉಚಿತವಾಗಿ ನೀರನ್ನು ನೀಡಲಾಗುವುದು ಎಂದು ತಿಳಿಸಿದರು.

ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಿರಂತರ ನೀರು ನೀಡುವ ನಿಟ್ಟಿನಲ್ಲಿ ಜಲಸಿರಿ ಯೋಜನೆಯು ರೂ.587 ಕೋಟಿ ಯೋಜನೆ ಸಿದ್ದ ಮಾಡಿದ್ದು, ಎಂಟು ವರ್ಷಗಳ ನಿರ್ವಹಣೆಗಾಗಿ ರೂಪಾಯಿ ಇನ್ನೂರ ನಾಲ್ಕು ಕೋಟಿ ಇಟ್ಟಿದ್ದೇವೆ. ಅದರಲ್ಲಿ ಹತ್ತೊಂಬತ್ತು ಓರಲ್ ಟಾಂಕ್, ಆರು ಗ್ರೌಂಡ್ ಲೆವೆಲ್ ಟ್ಯಾಂಕ್ ಸಂಪೂರ್ಣವಾಗಿದೆ. ಸಾವಿರದ ಇನ್ನೂರ ಎಂಬತ್ತೆಂಟು ಕಿ.ಮೀ. ಪೈಪ್ ಲೈನ್ ಹಾಕಲಿದ್ದು, ಇದರ ಕೆಲಸ ಸ್ವಲ್ಪ ಬಾಕಿ ಇದ್ದು, ಈ ಯೋಜನೆಯು ಸಂಪೂರ್ಣವಾದರೆ ಮಂಗಳೂರು ಮಹಾಜನತೆಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ನೀರು ಸಿಗಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್ ಚೌಟ, ಪಟ್ಟಣ ಸುಧಾರಣಾ ಸಮಿತಿ ಅಧ್ಯಕ್ಷ ಲೋಹಿತ್ ಅಮೀನ್, ಆರೋಗ್ಯ ಶಿಕ್ಷಣ ಸಾಮಾಜಿಕ ಸ್ಥಾಯಿ ಸಮಿತಿ ಭರತ್, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ ಕೆ., ದಿವಾಕರ ಪಾಂಡೇಶ್ವರ, ನಿಕಟಪೂರ್ವ ಮಾಜಿ ಮಹಾಪೌರ ಜಯಾನಂದ ಅಂಚನ್, ತುಂಬೆ ಪಂಚಾಯತ್ ಅಧ್ಯಕ್ಷ ಜಯಂತಿ ಕೇಶವ ಉಪಸ್ಥಿತರಿದ್ದರು.