ನವದೆಹಲಿ: ಕೆಲವೇ ಗಂಟೆಗಳಲ್ಲಿ ನಗರಗಳೇ ಕೊಚ್ಚಿಹೋಗಿವೆ ಎಂದು ನೇಪಾಳದ(Nepal) ವಿದೇಶಾಂಗ ಸಚಿವ ಶಿಶಿರ್ ಖನಾಲ್(Shisir Khanal) ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ತೀವ್ರತೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ : ವಯನಾಡಿನ ಬೆಟ್ಟದಲ್ಲಿ ಜಲಸ್ಫೋಟ – 8 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಸಾಧ್ಯತೆ

ಕಠ್ಮಂಡುವಿನಲ್ಲಿ ನಡೆದ ಎನ್‌ಡಿಟಿವಿ ವರ್ಲ್ಡ್ ಅನ್ವೀಕ್ಷಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ರಸುವಾ ಪ್ರದೇಶದಲ್ಲಿ ಉಂಟಾದ ಈ ದುರಂತದಲ್ಲಿ 160 ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ದೃಢಪಡಿಸಿದರು.
ಪ್ರವಾಹದಲ್ಲಿ ನಾಪತ್ತೆಯಾಗಿರುವವರಲ್ಲಿ ಹೆಚ್ಚಿನವರು ಮಾನಸ ಸರೋವರ(Masarovar Yatra) ಯಾತ್ರಿಕರಾಗಿದ್ದು, ಕನಿಷ್ಠ 300 ಮಂದಿ ಭಾರತೀಯರು(Indians) ಪತ್ತೆಯಾಗಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳು ಮಾನಸಸರೋವರ ಯಾತ್ರೆಗಾಗಿ ಪ್ರವಾಹ ಪೀಡಿತ ಮಾರ್ಗವನ್ನೇ ಬಳಸುತ್ತಾರೆ. ಸುಮಾರು 300 ಭಾರತೀಯರು ನಾಪತ್ತೆಯಾಗಿದ್ದಾರೆ. ಅವರೊಂದಿಗೆ ಸಂಪರ್ಕ ಸಾಧಿಸಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಒಟ್ಟಾರೆಯಾಗಿ ಸುಮಾರು 500 ವಿದೇಶಿ ಪ್ರಜೆಗಳು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಖನಾಲ್ ಹೇಳಿದರು.

ನೇಪಾಳಿ ನಾಗರಿಕರಷ್ಟೇ ವಿದೇಶಿ ಪ್ರಜೆಗಳ ಸುರಕ್ಷತೆಗೂ ಸರ್ಕಾರ ಬದ್ಧವಾಗಿದ್ದು, ಸಂಬಂಧಪಟ್ಟ ದೇಶಗಳ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇತ್ತೀಚಿನ ದಿನಗಳಲ್ಲಿ ನಮ್ಮನ್ನು ತಲ್ಲಣಗೊಳಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಇದು ಒಂದಾಗಿದೆ ಎಂದು ಬಣ್ಣಿಸಿದ ಸಚಿವರು ತಕ್ಷಣದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸದ್ಯ ನಮ್ಮ ಸಂಪೂರ್ಣ ಗಮನ ರಕ್ಷಣೆ ಮತ್ತು ತಕ್ಷಣದ ಪರಿಹಾರ ಕಾರ್ಯಗಳ ಮೇಲಿದೆ. ಜಾಗತಿಕ ಮಟ್ಟದಲ್ಲಿ ಹಲವರು ನೇಪಾಳಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಸರ್ಕಾರ ಈಗಾಗಲೇ ಪರಿಹಾರವನ್ನು ರವಾನಿಸಿದ್ದು, ಅವರಿಗೆ ನಮ್ಮ ಕೃತಜ್ಞತೆಗಳು ಎಂದರು.

ನೇಪಾಳಕ್ಕೆ ಬನ್ನಿ
ಈ ಸಂಕಷ್ಟದ ಸಮಯದಲ್ಲಿ ಇಡೀ ವಿಶ್ವವೇ ನೇಪಾಳದ ಬೆಂಬಲಕ್ಕೆ ನಿಲ್ಲಬೇಕು ಮತ್ತು ದೇಶದ ಪುನರ್‌ನಿರ್ಮಾಣಕ್ಕೆ ನೆರವಾಗಲು ಪ್ರವಾಸಿಗರು ನೇಪಾಳ ಭೇಟಿಯನ್ನು ಮುಂದುವರಿಸಬೇಕು ಎಂದು ಖನಾಲ್ ಮನವಿ ಮಾಡಿದರು.

ದೇಶದ ಹೆಚ್ಚಿನ ಭಾಗಗಳು ಪ್ರವಾಹದಿಂದ ಬಾಧಿತವಾಗಿಲ್ಲ. ಪೋಖರಾ ಮತ್ತು ಮೌಂಟ್ ಎವರೆಸ್ಟ್ ಪ್ರದೇಶಗಳು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಪ್ರವಾಸಿಗರಿಗೆ ಮುಕ್ತವಾಗಿವೆ. ದೇಶದ ಪುನರ್‌ನಿರ್ಮಾಣದಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುವುದರಿಂದ ಪ್ರವಾಸಿಗರು ನೇಪಾಳಕ್ಕೆ ಭೇಟಿ ನೀಡಬೇಕು. 2015ರ ಭೀಕರ ಭೂಕಂಪದ ನಂತರವೂ ನಾವು ಬಲಿಷ್ಠವಾಗಿ ಚೇತರಿಸಿಕೊಂಡಿದ್ದೇವೆ. ಈ ಬಾರಿಯೂ ನೇಪಾಳ ಮತ್ತೆ ಎದ್ದು ನಿಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.