ಶ್ರೀ ನೊಳಂಬ ಲಿಂಗಾಯತ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿ.ಎಂ.ಸಿದ್ಧರಾಮಯ್ಯ ಭಾಗವಹಿಸಿ ಮಾತನಾಡಿದರು.

ಸಾರ್ವತ್ರಿಕ ಮೂಲ ಆದಾಯದ ತತ್ವದ ಆಧಾರದ ಮೇಲೆ ಎಲ್ಲರಿಗೂ ಕೊಳ್ಳುವ ಶಕ್ತಿ ಬರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.

ಸರ್ಕಾರ ಎಲ್ಲಾ ಸಮಾಜದಲ್ಲಿನ ಬಡವರನ್ನು ಮುಖ್ಯ ವಾಹಿನಿಗೆ ತಂದು, ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಬೇಕು ಎಂದು ಪ್ರಯತ್ನ ಮಾಡುತ್ತಿದೆ. ಅನುಭವ ಮಂಟಪದಲ್ಲಿ ಸಮಸಮಾಜ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳಾಗುತ್ತಿತ್ತು. ಅಂಥ ಸಮಾಜವನ್ನು ಬಸವಾದಿ ಶರಣರು, ಸಿದ್ದರಾಮೇಶ್ವರರು ಬಯಸಿದ್ದರು.

ಶಿವಯೋಗಿ ಸಿದ್ದರಾಮೇಶ್ವರರು ಬಸವಣ್ಣನವರ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 12ನೇ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸಿ ಜೀವನದ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಜೀವನ ಮೌಲ್ಯಗಳನ್ನು ನಾವು ಅರಿಯಬೇಕು. ಹುಟ್ಟು ಆಕಸ್ಮಿಕ, ಸಾವು ಖಚಿತವಾದರೂ ಹುಟ್ಟು ಸಾವುಗಳ ಮಧ್ಯೆ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ನಮ್ಮ ಬದುಕಿನ ಅವಧಿಯಲ್ಲಿ ನಮ್ಮ ಬದುಕನ್ನು ನಾವು ಸಾರ್ಥಕಗೊಳಿಸಿಕೊಂಡಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಬಸವಾದಿ ಶರಣರು ಮನುಷ್ಯರಾಗಿ ಬದುಕಬೇಕೆಂದು ಹೇಳಿದ್ದಾರೆ. ಜೀವನದ ಸಾರವನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.

ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಿಶ್ವ ಸಾಹಿತ್ಯಕ್ಕೂ ದೊಡ್ಡ ಕೊಡುಗೆ ನೀಡಿದೆ. ಧರ್ಮಾಚರಣೆ, ಆಧ್ಯಾತ್ಮ ಜನರ ಭಾಷೆಯಲ್ಲಿ ಲಭ್ಯವಿರಲಿಲ್ಲ. ಸಾಮಾನ್ಯ ಜನರಿಗೆ ಓದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನರ ಭಾಷೆಯಲ್ಲಿ ಇದನ್ನು ತಿಳಿಸಿದ್ದು ಜಗಜ್ಯೋತಿ ಬಸವಣ್ಣನವರು.

ಶರಣ ಸಾಹಿತ್ಯದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಅಲ್ಲಮಪ್ರಭು, ಸಿದ್ದರಾಮೇಶ್ವರರು ಪ್ರಮುಖರು. ಬಸವಾದಿ ಶರಣರು ಮುಖ್ಯವಾಗಿ ನೀಡಿದ ಮೌಲ್ಯ ಕಾಯಕ ಮತ್ತು ದಾಸೋಹ. ಸತ್ಯವೇ ಸ್ವರ್ಗ, ಮಿತ್ಯವೆ ನರಕ ಎಂದ ಶರಣರು, ಮೌಢ್ಯಗಳನ್ನು ತಿರಸ್ಕರಿಸಿದ್ದರು. ಬಸವಾದಿ ಶರಣರು ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಕಂದಾಚಾರ, ಮೂಢನಂಬಿಕೆ, ಮೌಢ್ಯಗಳನ್ನು ತಿರಸ್ಕಾರ ಮಾಡಿದ್ದಾರೆ.

ಮನುಷ್ಯರು ಚಾತುರ್ವಣ ವ್ಯವಸ್ಥೆಯನ್ನು ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾರೆ. ಯಾವ ದೇವಸ್ಥಾನದೊಳಗೆ ಪ್ರವೇಶವಿಲ್ಲದ ದೇವಸ್ಥಾನದೊಳಗೆ ಪ್ರವೇಶಿಸಬೇಡಿ, ನೀವೇ ದೇಗುಲ ನಿರ್ಮಿಸಿ ಪೂಜಿಸಿ ಎಂದು ನಾರಾಯಣ ಗುರುಗಳು ಕರೆ ನೀಡಿದ್ದರು.

ಮನುಷ್ಯ ಮನುಷ್ಯ ನನ್ನು ಪ್ರೀತಿಸಬೇಕು. ಮನುಷ್ಯರಾಗಿರಬೇಕು ಎಂದು ಹೇಳಿದರೆ ಕೆಲವರಿಗೆ ಕೋಪ ಬರುತ್ತದೆ. ಸಿದ್ದರಾಮೇಶ್ವರನ ಜಯಂತಿ ಆಚರಿಸಿದಾಗ ಅವರ ಬೋಧನೆಯನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ಗೌರವ.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಸನದಲ್ಲಿ ಸುಮಾರು 40,000 ಶಾಖೆಗಳಿದ್ದು, ಅನುದಾನ ಕೋರಿರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.