500 ವರ್ಷಗಳ ಹಿಂದೆ ಕೆಂಪೇಗೌಡರು ಹಾಕಿಕೊಟ್ಟಂತಹ ಅಡಿಪಾಯ ನಮ್ಮ ಬ್ರಾಂಡ್ ಬೆಂಗಳೂರಿಗೆ ಶಕ್ತಿ ತುಂಬಿದೆ.‌ ಬೆಂಗಳೂರು ನಗರವನ್ನು ವಿಶ್ವವೇ ಎದುರು ನೋಡುತ್ತಿದೆ. ವ್ಯಾಸಂಗ- ವಾಸ, ಉದ್ಯೋಗಕ್ಕಾಗಿ ಈ ನಗರವನ್ನು ಅರಸಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು  ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದರು.  ಇದನ್ನೂ ಓದಿ : ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯ ಆಡಳಿತಗಾರರಾಗಿದ್ದರು – ಸಿ.ಎಂ.ಸಿದ್ಧರಾಮಯ್ಯ
ಬೆಂಗಳೂರು ಸರ್ವರಿಗೂ ಸಹಬಾಳ್ವೆ ನಡೆಸಲು ಅನುಕೂಲಕರ ವಾತಾವರಣ ಕಲ್ಪಿಸುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವೆಂದು ಹೆಸರಾಗಿದೆ. ಬಹಳ ನಿಷ್ಠೆಯಿಂದ ಹಾಗೂ ಜವಾಬ್ದಾರಿಯಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದೇನೆ. ಜನರ ಬದುಕಿಗೆ ನೆರವಾಗಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಹೊಸ ರೂಪವನ್ನು ಕೊಡಬೇಕೆನ್ನುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಗ್ರೇಟರ್ ಬೆಂಗಳೂರಿನ ಮೂಲಕ ಜನರಿಗೆ ಹೊಸ ಬದುಕನ್ನು ಕಲ್ಪಿಸಲಿದ್ದೇವೆ. ಇನ್ನೊಂದು ತಿಂಗಳೊಳಗೆ ಗ್ರೇಟರ್ ಬೆಂಗಳೂರಿನ ವ್ಯಾಪ್ತಿಯಲ್ಲಿ ಎಷ್ಟು ನಗರಗಳ ನಿರ್ಮಾಣ ಮಾಡಬೇಕು ಎಂಬುದನ್ನು ಘೋಷಿಸಲಿದ್ದೇನೆ ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ

ನಾವು 3 ‘ಕೆ’ಯನ್ನು ಸದಾ ನೆನಪಿಟ್ಟುಕೊಳ್ಳಬೇಕು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು, ವಿಕಾಸ ಸೌಧ ಹಾಗೂ ಉದ್ಯೋಗ ಸೌಧದ ನಿರ್ಮಾತೃ ಎಸ್.ಎಂ. ಕೃಷ್ಣ ಅವರು. ಇಡೀ ವಿಶ್ವಕ್ಕೆ ಬೆಂಗಳೂರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಬೆಂಗಳೂರಿನಲ್ಲಿ 60,000 ಜನರು ಕುಳಿತುಕೊಳ್ಳಬಹುದಾದಷ್ಟು ಸಾಮರ್ಥ್ಯವಿರುವ ಇನ್ನೊಂದು ಕ್ರೀಡಾಂಗಣವನ್ನು ನಿರ್ಮಿಸಲು ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರವಾಸಿ ಆಕರ್ಷಣೆಯಾಗಿ ಸ್ಕೈಡೆಕ್ ನಿರ್ಮಾಣವನ್ನೂ ಕೆಲ ದಿನಗಳಲ್ಲಿ ಪ್ರಾರಂಭಿಸಲಿದ್ದೇವೆ.
ಯೋಗಿ ಎನ್ನುವುದಕ್ಕಿಂತ ಉಪಯೋಗಿ ಎಂದು ಕರೆಸಿಕೊಂಡಾಗ ಮಾತ್ರ ಮನುಷ್ಯನೊಬ್ಬ‌ ಜೀವನದಲ್ಲಿ ಸಾರ್ಥಕ್ಯವನ್ನು ಪಡೆಯಲು ಸಾಧ್ಯ. ಯಾರನ್ನೋ ಮೆಚ್ಚಿಸುವ ಬದಲಾಗಿ, ಆತ್ಮಸಾಕ್ಷಿಗೆ ಒಪ್ಪುವ ರೀತಿಯಲ್ಲಿ ಸೇವೆ ಮಾಡಿದರೆ ಅದಕ್ಕಿಂತ ದೊಡ್ಡ ಸಮಾಧಾನ ಒಬ್ಬ ವ್ಯಕ್ತಿಗಿಲ್ಲ.
ಬೆಳಿಗ್ಗೆಯಿಂದ ನಡೆದ ಕೆಂಪೇಗೌಡ ಜಯಂತಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಸಂಘಟಿಸಲು ನೆರವಾದ ಎಲ್ಲರಿಗೂ ತುಂಬುಹೃದಯದ ಧನ್ಯವಾದ ಸಲ್ಲಿಸಿದರು.