ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ

ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26 ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ  ಒಟ್ಟು ಸಾಮಾನ್ಯ ವರ್ಗಕ್ಕೆ 24, ಪರಿಶಿಷ್ಟ ಜಾತಿ 5, ಪರಿಶಿಷ್ಟ ಪಂಗಡ ರೈತರಿಗೆ 2, ಕೃಷಿ ಹೊಂಡ ನಿರ್ಮಾಣದ ಗುರಿ ನಿಗದಿಪಡಿಸಲಾಗಿದೆ. 1 ಎಕರೆ ಮೇಲ್ಪಟ್ಟು ಸಾಗುವಳಿ ವಿಸ್ತೀರ್ಣ ಹೊಂದಿರುವ ರೈತರು ತಮ್ಮ ವ್ಯಾಪ್ತಿಯ ರೈತಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಳೆಗಾಲ ಆರಂಭಕ್ಕೆ ಮುನ್ನ ಆಧಾರ್, ಆರ್.ಟಿ.ಸಿ, ಬ್ಯಾಂಕ್ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರು ವಿನಂತಿಸಿದ್ದಾರೆ. ಇದನ್ನೂ ಓದಿ : ಕೇರಳ : ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ಕಂಟೇನರ್‌ಗಳು ಸಮುದ್ರಪಾಲು – ಹೆಚ್ಚಿದ ಆತಂಕ

ಮಳೆ ನೀರು ಸಂಗ್ರಹಿಸಿ ಅಗತ್ಯ ಬಿದ್ದಾಗ ಬೆಳೆಗಳಿಗೆ ನೀರುಣಿಸಲು ಪೂರಕವಾದ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಜಿಲ್ಲೆಯ ರೈತರು ಉತ್ಸುಕತೆ ತೋರುತ್ತಿದ್ದಾರೆ.  ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸರಕಾರ ಶೇ.90 ರಷ್ಟು ಸಹಾಯಧನ ನೀಡುತ್ತಿದೆ.  ಬಂಟ್ವಾಳ ತಾಲೂಕಿನಲ್ಲಿ ಕಳೆದ ಸಲ  ಒಟ್ಟು 48 ಕೃಷಿ ಹೊಂಡ ನಿರ್ಮಿಸುವ ಗುರಿ ಇತ್ತು. 48 ರೈತರು  ಅರ್ಜಿ ಸಲ್ಲಿಸಿದ್ದರು.ಗುರಿಯಂತೆ 48 ಫಲಾನುಭವಿಗಳು ಕೃಷಿ ಹೊಂಡವನ್ನು ಸರಕಾರದ ಸಹಾಯಧನ ಪಡೆದು ನಿರ್ಮಿಸಿಕೊಂಡಿದ್ದಾರೆ. ಇದನ್ನೂ ಓದಿ : ರಕ್ಷಣಾ ಪುರಸ್ಕಾರ ಸಮಾರಂಭ-2025 (ಹಂತ-1)ರಲ್ಲಿ ಪ್ರಧಾನಮಂತ್ರಿ ಭಾಗಿ

21x21x3 ಅಳತೆಯ ಕೃಷಿ ಹೊಂಡ ನಿರ್ಮಾಣಕ್ಕೆ 1.13 ಲಕ್ಷ ರೂ.ವೆಚ್ಚವಾಗಲಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 80 ಅಂದರೆ ರೂ.90,912 ಹಾಗೂ ಪರಿಶಿಷ್ಟ ವರ್ಗದವರಿಗೆ ಶೇ.90 ಅಂದರೆ ರೂ.1.02 ಲಕ್ಷ ಸಹಾಯಧನ ನೀಡಲಾಗುವುದು. ಇತರ ಗಾತ್ರದ ಕೃಷಿ ಹೊಂಡಗಳಿಗೂ ಅಳತೆಗೆ ಅನುಗುಣವಾಗಿ ಸಹಾಯಧನ ದೊರೆಯಲಿದೆ. ಕೃಷಿ ಹೊಂಡದ ಸುತ್ತ ತಂತಿ ಬೇಲಿ ನಿರ್ಮಿಸಲು ಸಾಮಾನ್ಯ ವರ್ಗದವರಿಗೆ ಶೇ.40 (7600 ದಿಂದ 14800 ರೂ.) ಮತ್ತು ಪರಿಶಿಷ್ಟ ವರ್ಗದವರಿಗೆ ಶೇ.50 (9500 ರಿಂದ 18500 ರೂ.) ರಷ್ಟು ಸಹಾಯಧನ ನೀಡಲಾಗುತ್ತದೆ.  ಇದಲ್ಲದೆ ಕೃಷಿ ಹೊಂಡಕ್ಕೆ ಅಳವಡಿಸುವ ಪಾಲಿಥಿನ್ (ಟಾರ್ಪಲ್)  ಅಳವಡಿಸಿಕೊಳ್ಳಲು ಸಾಮಾನ್ಯ ವರ್ಗದವರಿಗೆ ಶೇ.80 ಮತ್ತು ಪರಿಶಿಷ್ಟರಿಗೆ ಶೇ.90 ರಷ್ಟು ಸಹಾಯಧನ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.