ಪುತ್ತೂರು : ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂದು ಕೇಳಿದರೆ ಶ್ರೀರಾಮನ ಬದುಕನ್ನೇ ಉದಾಹರಣೆ ನೀಡುತ್ತೇವೆ. ನೈತಿಕತೆ ಬೇರೆ ಅಲ್ಲ, ಶ್ರೀರಾಮ ಬೇರೆ ಅಲ್ಲ. ರಾಮನ ವ್ಯಕ್ತಿತ್ವ ಎಲ್ಲರಿಗಿಂತ ವ್ಯತ್ಯಸ್ತವಾಗಿ, ಜನರಿಗೆ ಆದರ್ಶವಾಗಿ ಕಾಣಿಸಿಕೊಳ್ಳುತ್ತದೆ ಎಂದು ಯಕ್ಷಗಾನ ಅರ್ಥದಾರಿ ಹಾಗೂ ಪ್ರಾಧ್ಯಾಪಕ ರಾಧಾಕೃಷ್ಣ ಕಲ್ಚಾರ್ ಹೇಳಿದರು.

ಅವರು ಜ.13ರಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಶ್ರೀರಾಮೋತ್ಸವ – ಶ್ರೀರಾಮಭಾವ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವೈಚಾರಿಕತೆ ಎಂದರೆ ಸರಿಯಾಗಿ ಅಧ್ಯಯನ ಮಾಡಿ, ಚಿಂತನೆಗಳ ಮಂಥನ ಮಾಡಿ ವಿಚಾರಗಳನ್ನು ತಿಳಿದುಕೊಳ್ಳುವ ಮನೋಧರ್ಮ. ಶ್ರೀರಾಮನ ಕುರಿತು ವಿಚಾರ ಮಂಥನ ಮಾಡಿದರೆ ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಸೀತಾಪರಿತ್ಯಾಗ ಮಾಡಿ ನೈತಿಕ ಹೊಣೆಗಾರಿಕೆಯನ್ನು ನಿಭಾಯಿಸಿದ ಶ್ರೀರಾಮ ಧರ್ಮವಂತನೆಂದು ನಿರೂಪಿಸುತ್ತಾನೆ. ಮನುಷ್ಯನನ್ನು ದೇವರಾಗಿಸುವ ನೀತಿ ಎಂದರೆ ಅದು ರಾಮನೀತಿ. ಹಾಗಾಗಿ ಸಂದರ್ಭೋಚಿತ ನಿರ್ಧಾರಗಳನ್ನು ಕೈಗೊಂಡ ಶ್ರೀರಾಮ ಆದರ್ಶ ಪುರುಷ ಎಂದು ನುಡಿದರು.

ಡಾ| ಕೃಷ್ಣ ಭಟ್ ಕೆ.ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕೃತಿ ಮತ್ತು ಸನಾತನ ಸಂಸ್ಕೃತಿಯ ಚಿಂತನೆಗಳ ನಡುವೆ ಏರ್ಪಟ್ಟ ಹಣಾಹಣಿಯ ಮಧ್ಯೆ ಸಿಲುಕಿದೆ. ಈ ಸ್ಪರ್ಧೆಯಲ್ಲಿ ಗೆಲ್ಲುವುದು ನಮ್ಮ ಸನಾತನ ಸಂಸ್ಕೃತಿಯೇ ಎಂಬುದನ್ನು ಸಾಬೀತುಪಡಿಸಲು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿರುವುದೇ ಸಾಕ್ಷಿ. ತಲೆಮಾರುಗಳಿಂದ ತಲೆಮಾರುಗಳಿಗೆ ಶಕ್ತಿ ಮತ್ತು ಒಳ್ಳೆಯ ಚಿಂತನೆಗಳನ್ನು ವರ್ಗಾವಣೆ ಮಾಡಿದ ಶ್ರೀರಾಮ ನಮ್ಮೊಳಗೆ ಸೇರಿ ಹೋಗಿದ್ದಾನೆ. ಅದನ್ನು ನಮ್ಮ ಬದುಕಿನಲ್ಲಿ ಯಾವ ರೀತಿಯಾಗಿ ಅಳವಡಿಸಿಕೊಳ್ಳತ್ತೇವೆ ಎಂಬುದು ಪ್ರಮುಖಪಾತ್ರ ವಹಿಸುತ್ತದೆ ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುವುದನ್ನು ದೇಶಾದ್ಯಂತ ಸಂಭ್ರಮಿಸುತ್ತಿದ್ದೇವೆ. ಶ್ರೀರಾಮಚಂದ್ರ ಧರ್ಮವಂತನೂ, ಉತ್ತಮ ರಾಜಕಾರಣಿಯೂ ಆಗಿದ್ದಾನೆ. ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಪರಿಕಲ್ಪನೆಗೆ ಮಹತ್ತರ ಸ್ಥಾನವಿದೆ. ಹಾಗಾಗಿ ಶ್ರೀರಾಮನ ಗುಣಲಕ್ಷಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಕಾಲೇಜು ಆಡಳಿತ ಮಂಡಳಿಯ ಸದಸ್ಯರು, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ವಿಶೇಷ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಸ್ವಾಗತಿಸಿ, ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಕಾರ್ಯಕ್ರಮದ ಪ್ರಸ್ತಾವನೆಗೈದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮನಮೋಹನ ಎಂ ವಂದಿಸಿದರು. ವಿದ್ಯಾರ್ಥಿನಿ ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.