ನವದೆಹಲಿ: ದೆಹಲಿ ವಿಮಾನ ನಿಲ್ದಾಣದ (Delhi Airport) ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಇಂದು ಮುಂಜಾನೆ 5.30ಕ್ಕೆ ಈ ಅವಘಡ ಸಂಭವಿಸಿದೆ. ಭಾರೀ ಮಳೆಯ ಪರಿಣಾಮ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ ಘಟನೆ ನಡೆದ ಕೂಡಲೇ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.
ಸದ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಛಾವಣಿ ಕುಸಿತದಿಂದ ಟ್ಯಾಕ್ಸಿ ಸೇರಿದಂತೆ ಹಲವು ವಾಹನಗಳು ಜಖಂ ಆಗಿವೆ. ಘಟನೆಯ ಪರಿಣಾಮ ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್ಗಳನ್ನು ಮುಚ್ಚಲಾಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಎಕ್ಸ್ ಮಾಡಿ, ಟಿ1 ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತದ ಘಟನೆಯ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಅಗ್ನಿಶಾಮ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ ಎಂದು ಬರೆದುಕೊಂಡಿದ್ದಾರೆ.