ಅಹಮಾದಾಬಾದ್‌: 200 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುವ ಗುರಿಯನ್ನು ನಾವು ತಲುಪಿದ್ದೇವೆ. 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಯೋಜಿಸಿರುವ 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಎಕ್ಸ್‌ಪೋ ನಡೆಯುತ್ತಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

200 ಅಧಿಕ ವಿದೇಶಿ ಪ್ರತಿನಿಧಿಗಳು, ವಿವಿಧ ಕಂಪನಿಗಳು ಹಾಗೂ 10,000 ಸಾರ್ವಜನಿಕರು ಇದರಲ್ಲಿ ಭಾಗಿಯಾಗಿದ್ದರು. ಮೂರು ದಿನಗಳಲ್ಲಿ 40 ಸೆಷನ್ ಗಳು ನಡೆಯುತ್ತಿದ್ದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದಲ್ಲಿರುವ ಅವಕಾಶಗಳುತ್ತು ಹೂಡಿಕೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ.

ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಮುಂದಿನ ಮೂರು ದಿನ ಇಂಧನದ ಭವಿಷ್ಯ ಮತ್ತು ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ, ಈ ವಲಯದ ತಜ್ಞರಿದ್ದಾರೆ ಇದರಿಂದ ನಮಗೆ ಮಾರ್ಗದರ್ಶನ ಸಿಗಲಿದೆ ಒಬ್ಬರಿಂದ ಮತ್ತೊಬ್ಬರು ಈ ಎಕ್ಸ್‌ಪೋದಿಂದ ಹೊಸತನ್ನು ಕಲಿಯಲಿದ್ದೇವೆ ಎಂದರು.

ಪ್ರತಿಯೊಂದು ಸೆಕ್ಟರ್ ಅನ್ನು ಗಮನ ಹರಿಸಿ, ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ, 7 ಕೋಟಿ ಮನೆ ನಿರ್ಮಾಣ ಮಾಡುತ್ತಿದ್ದೇವೆ, ಹಿಂದಿನ ಎರಡು ಅವಧಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ. ಕಳೆದ ನೂರು ದಿನಗಳಲ್ಲಿ 15 ವಂದೇ ಭಾರತ್ ಟ್ರೈನ್ ಚಾಲನೆ ನೀಡಲಾಗಿದೆ. 2025 ಒಳಗೆ ಪೆಟ್ರೋಲ್ ಒಳಗೆ 20% ಎಥಿನಾಲ್ ಬ್ಲೆಡಿಂಗ್ ಮಾಡಲಿದ್ದೇವೆ.

ಭಾರತದಲ್ಲಿ ಕಲ್ಲಿದ್ದಲು ಗ್ಯಾಸ್ ನಿಕ್ಷೇಪ ಹೆಚ್ಚಿನ ಪ್ರಮಾಣ ಇಲ್ಲ. ಹೀಗಾಗಿ ಸೋಲಾರ್ ಮತ್ತು ನ್ಯೂಕ್ಲಿಯರ್ ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 2030 ರ ವೇಳೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ ಹೊಂದಿದೆ. ಸೂರ್ಯಘರ್ ಯೋಜನೆ ಅಧ್ಯಯನ ಮಾಡಬೇಕು, ಮನೆ ಛಾವಣಿ ಮೇಲೆ ಸೋಲಾರ್ ಅಳವಡಿಸಲು ಸಬ್ಸಿಡಿ ನೀಡುವುದಲ್ಲದೇ ಸರ್ಕಾರ ಸಹಾಯ ಮಾಡುತ್ತಿದೆ, 1.30 ಕೋಟಿ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. 3.5 ಲಕ್ಷ ಮನೆಗಳಲ್ಲಿ ಸೋಲಾರ್ ಅಳವಡಿಕೆಯಾಗಿದೆ. ಈಗ ಜನರು ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಣ ಮದ ಸಂಪಾದನೆಯಾಗಲಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿ ಹೆಚ್ಚಿದೆ, ಭಾರತದ ಸೋಲಾರ್ ಶಕ್ತಿ 33% ಹೆಚ್ಚಾಗಿದೆ. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಲ್ಲಿ ಸಾಕಷ್ಟು ಜನರು ಇಂದು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ, 32.45 ಲಕ್ಷ ಕೋಟಿ 2030 ರೊಳಗೆ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬಂದಿದ್ದಾರೆ ಎಂದರು.