ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆ.29 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದಲ್ಲಿ 11,200 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ದೇಶಕ್ಕೆ ಸಮರ್ಪಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 2 ದಿನಗಳ ಹಿಂದೆ ಪ್ರತಿಕೂಲ ಹವಾಮಾನದಿಂದಾಗಿ ಪುಣೆಯಲ್ಲಿ ತಮ್ಮ ಕಾರ್ಯಕ್ರಮ ರದ್ದುಗೊಳಿಸಿದ್ದನ್ನು ನೆನಪಿಸಿದರು. ಇಂದಿನ ವರ್ಚುವಲ್ ಕಾರ್ಯಕ್ರಮದಲ್ಲಿ ತಂತ್ರಜ್ಞಾನಕ್ಕೆ ಮನ್ನಣೆ ನೀಡಲಾಗಿದೆ. ಮಹಾನ್ ವ್ಯಕ್ತಿಗಳ ಸ್ಫೂರ್ತಿಯ ಭೂಮಿ ಮಹಾರಾಷ್ಟ್ರದ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ನ್ಯಾಯಾಲಯದಿಂದ ಸ್ವರ್ಗೇಟ್‌ವರೆಗೆ ಪುಣೆ ಮೆಟ್ರೋ ವಿಭಾಗದ ಉದ್ಘಾಟನೆ ಮತ್ತು ಪುಣೆ ಮೆಟ್ರೋ ಹಂತ-1ರಲ್ಲಿ ಸ್ವರ್ಗೇಟ್-ಕಟ್ರಾಜ್ ಮಾರ್ಗ ವಿಸ್ತರಣೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಭಿದೇವಾಡದಲ್ಲಿ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥ ಪ್ರಥಮ ಬಾಲಕಿಯರ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪುಣೆಯಲ್ಲಿ ವಾಸಿಸುವ ಜನರ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ತ್ವರಿತ ಪ್ರಗತಿಯಾಗಿದೆ ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು.

“ಭಗವಾನ್ ವಿಠ್ಠಲನ ಭಕ್ತರು ಇಂದು ವಿಶೇಷ ಉಡುಗೊರೆ ಸ್ವೀಕರಿಸಿದ್ದಾರೆ”, ನಗರಕ್ಕೆ ನೇರ ವಿಮಾನ ಸಂಪರ್ಕ ಸ್ಥಾಪಿಸಲು ಸೋಲಾಪುರ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸಲಾಗಿದೆ. ಟರ್ಮಿನಲ್ ಸಾಮರ್ಥ್ಯ ಹೆಚ್ಚಿದ್ದು, ಈಗಿರುವ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ಹೊಸ ಸೇವೆಗಳು ಹಾಗೂ ಸೌಲಭ್ಯಗಳು ಸಿಗಲಿವೆ. ಈ ಮೂಲಕ ಭಗವಾನ್ ವಿಠ್ಠಲ ಭಕ್ತರಿಗೆ ಅನುಕೂಲವಾಗಿದೆ. ಈ ವಿಮಾನ ನಿಲ್ದಾಣವು ಉದ್ಯಮಗಳು, ಕೈಗಾರಿಕೆಗಳು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ಮಹಾರಾಷ್ಟ್ರದ ಜನರನ್ನು ಪ್ರಧಾನಿ ಅಭಿನಂದಿಸಿದರು.

“ಇಂದು ಮಹಾರಾಷ್ಟ್ರಕ್ಕೆ ಹೊಸ ಸಂಕಲ್ಪ, ನಿರ್ಣಯಗಳೊಂದಿಗೆ ಬಹುದೊಡ್ಡ ಗುರಿಗಳ ಅಗತ್ಯವಿದೆ”. ಪುಣೆಯಂತಹ ನಗರಗಳನ್ನು ಪ್ರಗತಿ ಮತ್ತು ನಗರಾಭಿವೃದ್ಧಿಯ ಕೇಂದ್ರವನ್ನಾಗಿ ಮಾಡುವ ಅಗತ್ಯವಿದೆ. ಪುಣೆಯ ಪ್ರಗತಿ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಒತ್ತಡ ಕುರಿತು ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಈಗಲೇ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಈ ಗುರಿ ಸಾಧಿಸಲು, ಪ್ರಸ್ತುತ ರಾಜ್ಯ ಸರ್ಕಾರವು ಪುಣೆಯ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ನಗರವನ್ನು ವಿಸ್ತರಿಸಿದಂತೆ ಸಂಪರ್ಕಕ್ಕೂ ಉತ್ತೇಜನ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.

ಮಹಾರಾಷ್ಟ್ರದ ಪ್ರಗತಿ ಖಾತ್ರಿಪಡಿಸುವಲ್ಲಿ ಅಭಿವೃದ್ಧಿ-ಚಾಲಿತ ಆಡಳಿತದ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಈ ನಿರಂತರತೆಯ ಮಧ್ಯೆ ಬರುವ ಯಾವುದೇ ಅಡ್ಡಿಯು ರಾಜ್ಯದ ಗಮನಾರ್ಹ ನಷ್ಟಕ್ಕೆ ಕಾರಣವಾಗುತ್ತದೆ. ಮೆಟ್ರೋ ಉಪಕ್ರಮಗಳಿಂದ ಹಿಡಿದು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮತ್ತು ರೈತರಿಗೆ ನಿರ್ಣಾಯಕ ನೀರಾವರಿ ಯೋಜನೆಗಳ ತನಕ ಹಲವಾರು ಸ್ಥಗಿತಗೊಂಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಡಬಲ್ ಎಂಜಿನ್ ಸರ್ಕಾರದ ಕ್ರಮವಾಗಿದೆ.

ರಾಷ್ಟ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ಮಹಾರಾಷ್ಟ್ರ ಪ್ರಮುಖ ಪಾತ್ರ ವಹಿಸಲಿದೆ ಎಂಬ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಪ್ರಧಾನಿ, “ನಾವು ಒಟ್ಟಾಗಿ ‘ವಿಕಸಿತ ಮಹಾರಾಷ್ಟ್ರ, ವಿಕಸಿತ ಭಾರತ”ದ ಗುರಿ ಸಾಧಿಸುತ್ತೇವೆ ಎಂದು ಹೇಳಿ, ತಮ್ಮ ಭಾಷಣ ಮುಕ್ತಾಗೊಳಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಸಿ ಪಿ ರಾಧಾಕೃಷ್ಣನ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.