ಬಂಟ್ವಾಳ: ಸಮಾಜದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡುವಾಗ ಆರೋಪಗಳು, ತೆಗಳಿಕೆಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಮ್ಮ ಹೆಜ್ಜೆಯನ್ನು ಸಮಾಜದ ಒಳಿತಿಗಾಗಿ ಬಳಸಿದಾಗ ಯಶಸ್ಸು ಅರಸಿ ಬರುತ್ತದೆ ಎಂದು ಫರ್ಲಾ ವೆಲಂಕಣಿ ಚರ್ಚ್ ನ ಧರ್ಮಗುರುಗಳಾದ ವಂ|ಫಾ| ಜೋನ್ ಪ್ರಕಾಶ್ ಪಿರೇರಾ ಹೇಳಿದರು.
ಅವರು ಡಿ.23ರಂದು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅನಿಲ್ ಲೋಬೋ ಅವರ ಆಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 112 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್ ಉನ್ನತಿಯ ಹಿಂದೆ ಹಲವರ ಶ್ರಮ ಇದೆ. ಇದೀಗ ಶತಮಾನದ ಹೊಸ್ತಿಲು ದಾಟಿ ಮುನ್ನಡೆಸುತ್ತಿರುವ ಅನಿಲ್ ಲೋಬೋ ಮತ್ತು ತಂಡದ ಶ್ರಮಕ್ಕೆ ದೇವರ ಅನುಗ್ರಹ ಇರಲಿ ಎಂದು ಆರ್ಶೀವದಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಹಕಾರ ರತ್ನ ಪುರಸ್ಕೃತ, ಎಂಸಿಸಿ ಬ್ಯಾಂಕ್ ನ ಚೆಯರ್ಮೆನ್ ಅನಿಲ್ ಲೋಬೋ ಮಾತನಾಡಿ ಎಂಸಿಸಿ ಬ್ಯಾಂಕ್ ಎಂಬುದು ಯಾರೋ ಸಮುದ್ರಕ್ಕೆ ಇಳಿಸಿಬಿಟ್ಟ ದೋಣಿಯಾಗಿದೆ. ನಾವು ಅದನ್ನ ಸಾಗರದ ಮಧ್ಯೆ ದಡ ಸೇರಿಸಲು ಪ್ರಯತ್ನಪಡುತ್ತಿದ್ದೇವೆ. ಈ ನಡುವೆ ಪ್ರಶಸ್ತಿ ಪುರಸ್ಕಾರ, ಅಭಿನಂದನೆಗಳು ಸಾಮಾನ್ಯವಾಗಿ ಬರುತ್ತಿದೆ. ಆದರಿಂದ ಹಿಗ್ಗದೆ ಸಮಾಜಕ್ಕಾಗಿ ಇನ್ನಷ್ಟು ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ, ನೋಟರಿ ನ್ಯಾಯವಾದಿ ಅರುಣ್ ರೋಶನ್ ಡಿʼಸೋಜ, ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿʼಸಿಲ್ವ, ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷೆ ಪ್ಲೇವಿ ಡಿʼಸೋಜ, ಎಂಸಿಸಿ ಬ್ಯಾಂಕ್ ನಿರ್ದೇಶಕ ವಿನ್ಸೆಂಟ್ ಲಸ್ರಾದೋ ಶುಭ ಹಾರೈಸಿ ಮಾತನಾಡಿದರು.
ಅಭಿನಂದನಾ ಸಮಾರಂಭ ಸಮಿತಿ ಸಂಚಾಲಕ ಪಿಯೂಸ್ ಎಲ್. ರೋಡ್ರಿಗಸ್ ಅಭಿನಂದನಾ ಭಾಷಣ ಮಾಡಿದರು. ಸಂದೀಪ್ ಮೆನೇಜಸ್ ಸ್ವಾಗತಿಸಿ ಪ್ರಾಸ್ತಾವನೆಗೈದರು. ವಾಲ್ಟರ್ ನೊರೊನ್ಹಾ ವಂದಿಸಿ, ಸುನಿಲ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು.