ಬಂಟ್ವಾಳ : ಡಿಸೆಂಬರ್ ೯ ರಂದು ರಾತ್ರಿ ಹಠಾತ್ ಅಕಾಲಿಕವಾಗಿ ಮೃತಪಟ್ಟ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಶಿಕ್ಷಕಿ, ಉಪ್ಪುಗುಡ್ಡೆ ನಿವಾಸಿ ಶ್ರೀಮತಿ ಪ್ರೇಮಾ ಟೀಚರ್ (೫೨) ಅವರಿಗೆ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಶ್ರದ್ದಾಂಜಲಿ ಸಭೆ ಹಾಗೂ ನುಡಿನಮನ ಕಾರ‍್ಯಕ್ರಮ ನಡೆಯಿತು.
ನುಡಿ ನಮನ ಸಲ್ಲಿಸಿ ಮಾತನಾಡಿದ ಪುರಸಭಾ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು, ದಿವಂಗತ ಪ್ರೇಮಾ ಟೀಚರ್ ಕೇವಲ ಅಂಗನವಾಡಿ ಪುಟಾಣಿಗಳಿಗೆ ಮಾತ್ರವಲ್ಲದೆ ಮಕ್ಕಳ ಪೋಷಕರು ಹಾಗೂ ಸ್ಥಳೀಯ ಬಂಗ್ಲೆಗುಡ್ಡೆ ನಿವಾಸಿಗಳಿಗೂ ಅಚ್ಚುಮೆಚ್ಚಿನವರಾಗಿದ್ದು, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಂಗನವಾಡಿ ಕೇಂದ್ರಕ್ಕೆ ಬೇಕಾದ ಸಕಲ ಮೂಲಭೂತ ಸೌಲಭ್ಯಗಳನ್ನು ಸಂಬಂದಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ದಾನಿಗಳ ಜೊತೆ ಮಾತನಾಡಿ ವ್ಯವಸ್ಥೆ ಮಾಡಿಸಿಕೊಳ್ಳುವಲ್ಲಿ ಉತ್ಸಾಹ ತೋರುವ ಮೂಲಕ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಗಮನ ಸೆಳೆದಿದ್ದರು. ಅಂಗನವಾಡಿ ಮಕ್ಕಳ ನಿರ್ವಹಣೆ ಜೊತೆಗೆ ಸರಕಾರಿ ಯೋಜನೆಗಳ ಮಾಹಿತಿಗಳನ್ನು ಸಕಾಲದಲ್ಲಿ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಪ್ರತ್ಯೇಕ ಕಾಳಜಿ ವಹಿಸುತ್ತಿದ್ದರು ಎಂದು ಕೊಂಡಾಡಿದರು.
ಸಮುದಾಯ ಆರೋಗ್ಯಾಧಿಕಾರಿ ಲೀಲಾವತಿ ಮಾತನಾಡಿ ಅಂಗನವಾಡಿ ಕಾರ್ಯನಿರ್ವಹಣೆಯಲ್ಲಿ ಶಿಕ್ಷಕಿ ಪ್ರೇಮಾ ಅವರು ಯಾವುದೇ ಪ್ರಮಾದವಿಲ್ಲದೆ ನಿರ್ವಹಿಸಿದ್ದರು ಎಂದರು. ಆರೋಗ್ಯ ಕಾರ್ಯಕರ್ತರಾದ ಜ್ಯೋತಿಲಕ್ಷ್ಮಿ ಹಾಗೂ ಅಕ್ಷತ, ಶಾಂತಿಗುಡ್ಡೆ ಅಂಗನವಾಡಿ ಕಾರ್ಯಕರ್ತೆಯರಾದ ದೇವಕಿ ಜೈನರಪೇಟೆ, ಶಶಿಕಲಾ, ಮೆಲ್ಕಾರ್ ಅಂಗನವಾಡಿಯ ವಸಂತಿ, ಉಪ್ಪುಗುಡ್ಡೆ ಅಂಗನವಾಡಿಯ ಹರಿಣಾಕ್ಷಿ, ರೆಂಗೇಲು ಅಂಗನವಾಡಿಯ ಬಬಿತಾ, ಬೊಂಡಾಲ ಅಂಗನವಾಡಿಯ ವೀಣಾ, ಬೋಳಂಗಡಿ ಅಂಗನವಾಡಿಯ ಆಲಿಸ್ ಫರ‍್ನಾಂಡಿಸ್, ಬಂಗ್ಲೆಗುಡ್ಡೆ ಅಂಗನವಾಡಿ ಸಹಾಯಕಿ ಜ್ಯೋತಿ ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಳೆದ ಶನಿವಾರ ರಾತ್ರಿ (ಡಿ ೯) ಹಠಾತ್ ಆಗಿ ಅನಾರೋಗ್ಯ ಸಮಸ್ಯೆಗೆ ಈಡಾಗಿದ್ದ ಪ್ರೇಮಾ ಟೀಚರ್ ಅವರು ಅಕಾಲಿಕವಾಗಿ ಮೃತಪಟ್ಟಿದ್ದರು. ಅಂಗನವಾಡಿ ಶಿಕ್ಷಕಿ ಪ್ರೇಮಾ ಟೀಚರ್ ಅವರ ಹಠಾತ್ ನಿಧನಕ್ಕೆ ಸ್ಥಳೀಯರು ದಿಗ್ಭ್ರಮೆ ಹಾಗೂ ತೀವ್ರ ಖೇದ ವ್ಯಕ್ತಪಡಿಸಿದ್ದರು.
ಶ್ರದ್ದಾಂಜಲಿ ಸಭೆ ಹಾಗೂ ನುಡಿನಮನ ಕಾರ‍್ಯಕ್ರಮ
