ಅವರು ಎ.3ರಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇವಿನಮಟ್ಟಿ ಗ್ರಾಮದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಮೇಶ್ ಮೇಟಿ ಗೆದ್ದು ಬಂದರೆ ನಿಮ್ಮ ಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡ್ತಾರೆ ಎನ್ನುವ ವಿಶ್ವಾಸ ನನಗಿದೆ. ಹೆಚ್.ವೈ. ಮೇಟಿಯವರು ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, ಸಂಸದರಾಗಿ ತಳ ಸಮುದಾಯ ಮತ್ತು ಬಡವರ ಪರವಾಗಿ ಕೆಲಸ ಮಾಡಿದ್ದರು. ಅದೇ ಕೆಲಸವನ್ನು ಉಮೇಶ್ ಮೇಟಿ ಮುಂದುವರೆಸುತ್ತಾರೆ.
ನಮ್ಮ ಸರ್ಕಾರ ಸಾಲ ಮಾಡಿದೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ವಿತ್ತೀಯ ಹೊಣೆಗಾರಿಕಾ ಕಾಯ್ದೆಯ ಮಾನದಂಡಗಳನ್ನು ಮೀರಿ ನಾವು ಸಾಲ ಮಾಡಿಲ್ಲ. ಈ ಸತ್ಯವನ್ನು ಬಿಜೆಪಿ ಹೇಳುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲು ಬರಲಿಲ್ಲ. ಜೊತೆಗೆ ಜಿಎಸ್ಟಿ ಮೂಲಕ ನಮಗೆ ಬರಬೇಕಿದ್ದ ತೆರಿಗೆ ಕೇಂದ್ರದ ಅವೈಜ್ಞಾನಿಕ ನೀತಿಯಿಂದಾಗಿ 10 ಸಾವಿರ ಕೋಟಿ ಕಡಿಮೆಯಾಯಿತು. ಆದರೂ ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿಲ್ಲ. ಜೊತೆಗೆ ಅಭಿವೃದ್ಧಿ ಕೆಲಸಗಳನ್ನೂ ಮುಂದುವರೆಸಿದ್ದೇವೆ. ಹೀಗಾಗಿ ನಮ್ಮದು ನುಡಿದಂತೆ ನಡೆದ ಪಕ್ಷ.
ಅಧಿಕಾರ ಇದ್ದಾಗ ಕೆಲಸ ಮಾಡದೆ ಈ ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿ ಗೆ ನಿಮ್ಮ ಮತ ಪಡೆಯುವ ಯೋಗ್ಯತೆ ಇಲ್ಲ. ಯೋಗ್ಯತೆ ಇಲ್ಲದವರಿಗೆ ನಿಮ್ಮ ಮತ ಕೊಡಬೇಡಿ.
ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಪಪ್ರಚಾರದ ನಡುವೆಯೂ ಗೆದ್ದಿದ್ದು ಕಾಂಗ್ರೆಸ್ ಪಕ್ಷವೇ. ಈ ಚುನಾವಣೆಯಲ್ಲೂ ಎರಡೂ ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ. ಜೊತೆಗೆ 2028ಕ್ಕೂ ನಾವೇ ಗೆದ್ದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.