ಬಂಟ್ವಾಳ: ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿಕೊಂಡು ಪೌಪ್ಠಿಕ ಆಹಾರವನ್ನು ಸೇವಿಸಿಕೊಂಡು ಆರೋಗ್ಯ ರಕ್ಷಣೆ ಮಾಡಬೇಕು. ಆ ಮೂಲಕ ತಾವು ಕ್ಷಯ ರೋಗ ಮುಕ್ತರಾಗಿ ಕ್ಷಯ ಮುಕ್ತ ಭಾರತ ನಿರ್ಮಿಸಲು ಸಹಕರಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.


ಅವರು ಡಿ.೫ ರಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ೨೦೨೫ರ ವೇಳೆಗೆ ಭಾರತವನ್ನು ಕ್ಷಯ ಮುಕ್ತರಾಷ್ಟçವನ್ನಾಗಿ ರೂಪಿಸುವ ಉದ್ದೇಶದಿಂದ ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಆಹಾರ ದವಸ ಧಾನ್ಯ ವಿತರಿಸಿ ಮಾತನಾಡಿದರು.
ಇದೊಂದು ಪವಿತ್ರವಾದ ಕೆಲಸ ನಮ್ಮ ಜಿಲ್ಲೆಯಲ್ಲಿ ಸಿಡಿಬು, ಆನೆಕಾಲು ರೋಗದಂತಹ ಮಾರಣಾಂತಕ ರೋಗಗಳು ಇದ್ದರೂ ಈಗ ಸಂಪೂರ್ಣ ನಿರ್ಮೂಲನವಾಗಿದೆ. ಸೂಕ್ತ ಔಷಧಿ ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸುವುದರಿಂದ ಕ್ಷಯ ರೋಗವನ್ನು ಗುಣಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಪೌಷ್ಠಿಕ ಆಹಾರವನ್ನು ನೀಡುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದ್ದು ಆರ್ಥಿಕ ಹೊರೆಯ ಮಧ್ಯೆಯೂ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದಲ್ಲಿ ಸೇವಾಂಜಲಿ ಸಂಸ್ಥೆ ನಿಸ್ವಾರ್ಥವಾಗಿ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಇಲಾಖೆಯ ಕ್ಷಯ ರೋಗ ಮೇಲ್ವಿಚಾರಕ ಡೇವಿಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಾರಾಯಣ ಬಡ್ಡೂರು, ಸುಕುಮಾರ್ ಆರ್ಕುಳ, ದಿನೇಶ್ ಎನ್. ತುಂಬೆ ಉಪಸ್ಥಿತರಿದ್ದರು.
ಕೃಷ್ಣ ಅರ್ಕುಳ, ಸುಕೇಶ್ ಶೆಟ್ಟಿ ತೇವು, ಪ್ರಶಾಂತ್ ತುಂಬೆ, ಪದ್ಮನಾಭ ಕಿದೆಬೆಟ್ಟು, ಎಫ್. ಗಣೇಶ್ ಅರ್ಕುಳ ಹಾಗೂ ಆಶಾ ಕಾರ್ಯಕರ್ತರು ಸಹಕರಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿ, ವಂದಿಸಿದರು.